ಪೆಜತ್ತಕಟ್ಟೆ ದಾರೂಲ್ ಅಮಾನ್ ಎಜ್ಯುಕೇಶನ್ ಅಕಾಡೆಮಿ ಕಟ್ಟಡ ನಿರ್ಮಾಣ, ಸಮಾವೇಶಕ್ಕೆ ಎಲ್ಲೂರು ಗ್ರಾಮ ಪಂಚಾಯತ್ ತಡೆ

ಕಚೇರಿಯ ಬಾಗಿಲಿಗೆ ನೋಟಿಸು ಅಂಟಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಎಲ್ಲೂರು ಗ್ರಾಮ ಪಂಚಾಯಿತಿನಲ್ಲಿ ಈ ಹಿಂದಿನ ಪಿಡಿಒ ಆಗಿದ್ದು, ಬೆಳ್ಳೆ ಗ್ರಾ ಪಂ.ನಲ್ಲಿ ಅಮಾನತು ಹೊಂದಿದ್ದ ಬಿನ್ನಿ ಕ್ವಾಡ್ರಸ್ ಎಂಬವರು ಗ್ರಾಮ ಪಂಚಾಯಿತಿಯ ಸಭೆಯಲ್ಲಿ ನಿರ್ಣಯಿಸದೆ ಯಾವುದೇ ಸದಸ್ಯರ ಗಮನಕ್ಕೂ ತಾರದೆ ಏಕಾಏಕಿ ನೀಡಿದ ಕಟ್ಟಡ ಪರವಾನಿಗೆಯನ್ನು, ಇದೀಗ ಅಸ್ಥಿತ್ವದಲ್ಲಿರುವ ಸಮಿತಿ ಸಾರ್ವಜನಿಕರ ಮನವಿಯ ಮೇರೆಗೆ ತುರ್ತು ಸಭೆ ನಡೆಸಿ ಆ ಪರವಾನಿಗೆ ರದ್ದುಗೊಳಿಸಿ ನಿರ್ಣಯ ಕೈಕೊಂಡಿದೆ.

ಎಲ್ಲೂರು ಗ್ರಾಮ ಪಂಚಾಯಿತಿನ ಅಧ್ಯಕ್ಷೆ ವಸಂತಿ ಮಧ್ವರಾಜ್, ಉಪಾಧ್ಯಕ್ಷ ಜಯಂತಕುಮಾರ್ ಸಹಿತ ಸದಸ್ಯರು ಪೆಲತ್ತ ಕಟ್ಟೆಯ ದಾರೂಲ್ ಅಮಾನ್ ಎಜ್ಯುಕೇಶನ್ ಅಕಾಡೆಮಿಯ ಕಚೇರಿಗೆ ತೆರಳಿ, ಅಲ್ಲಿ ಯಾರೂ ಇಲ್ಲದ ಕಾರಣ ಗ್ರಾ ಪಂ ನಿರ್ಣಯದ ಪ್ರತಿಯನ್ನು ಬಾಗಿಲಿಗೆ ಅಂಟಿಸಿದ್ದು, ಆ ಬಳಿಕ ಈ ಸಂಸ್ಥೆಗೆ ಸೇರಿದ ವ್ಯಕ್ತಿಯೊಬ್ಬರು ಆಗಮಿಸಿದ್ದರಿಂದ ಅವರಲ್ಲಿ ಆ ನಿರ್ಣಯ ಪ್ರತಿಯನ್ನು ನೀಡಿದ್ದಾರೆ.

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಗ್ರಾ ಪಂ ಉಪಾಧ್ಯಕ್ಷ ಜಯಂತಕುಮಾರ್, “ಪರವಾನಿಗೆ ನೀಡುವ ಮೂಲಕ ಅಂದಿನ ಪಿಡಿಒ ಮಾಡಿದ ತಪ್ಪಿನಿಂದ ಇದೀಗ ಸಮಸ್ಯೆ ಉದ್ಭವಗೊಂಡಿದೆ. ಯಾವುದೇ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಗ್ರಾ ಪಂ ಪರವಾನಿಗೆ ನೀಡ ಬಾರದೆಂಬ ಆದೇಶ ಸರ್ಕಾರದ್ದಾಗಿದ್ದರೂ, ಪಿಡಿಒ ಅವರಲ್ಲಿ ಅಕ್ರಮವಾಗಿ ಪರವಾನಿಗೆ ಪಡೆದ ಈ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಈ ಭಾಗದಲ್ಲಿ ಯಾವುದೇ ಮುಸ್ಲಿಂ ಕುಟುಂಬಗಳು ವಾಸವಾಗಿಲ್ಲವಾದರೂ ಈ ಭಾಗದಲ್ಲಿ ಪ್ರಾರ್ಥನಾ ಮಂದಿರವಾಗಲಿ, ಇತರೆ ಯಾವುದೇ ಸಭೆ ಸಮಾರಂಭವಾಗಲಿ ನಡೆಸುವ ಅಗತ್ಯ ಕಾಣುತ್ತಿಲ್ಲ. ಇದು ಕೇವಲ ಶಾಂತವಾಗಿರುವ ಈ ಪ್ರದೇಶದಲ್ಲಿ ಕೋಮು ಸೌರ್ಹಾದತೆಗೆ ದಕ್ಕೆ ತರುವ ಹುನ್ನಾರವಾಗಿದ್ದು, ಆ ಕಾರಣದಿಂದ ನಾವು ಈ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಹಾಗೂ ರಾಜ್ಯ ಸುನ್ನಿ ಸ್ಪೂಡೆಂಟ್ಸ್ ಫೆಡರಢಶನ್ ಎಸ್ಸೆಸ್ಸೆಫ್ ರಾಜ್ಯ ಪ್ರತಿನಿಧಿಗಳ ಸಂಗಮಕ್ಕೆ ಅವಕಾಶ ಕೋರಿ ನೀಡಿದ ಅರ್ಜಿಯೂ ತಿರಸ್ಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ನೋಟಿಸು ಜಾರಿಮಾಡಲಾಗಿದ್ದು, ಇದನ್ನು ಮೀರಿಯೂ ಕಟ್ಟಡ ನಿರ್ಮಾಣ, ಸಮಾರಂಭ ನಡೆಸುವ ಪ್ರಯತ್ನವನ್ನಾಗಲೀ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.

sಸ್ಥಳೀಯರಾದ ಕಿಶೋರ್ ಮಾತನಾಡಿ, “ಈ ಭಾಗದ ಸ್ಥಳವನ್ನು ಮುಸ್ಲಿಂ ಕುಟುಂಬವೊಂದು ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದು, ಇದೀಗ ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಸ್ಥಳೀಯರಾದ ನಮ್ಮನ್ನು ಬೆಚ್ಚಿ ಬೀಳಿಸುತ್ತಿದೆ. ಈ ಸೈಟಿಗೆ ಅಪರಿಚಿತ ಮುಸ್ಲಿಂ ಯುವಕರು ಹೊತ್ತಲ್ಲದ ಹೊತ್ತಲ್ಲಿ ಆಗಮಿಸುತ್ತಿರುವುದಲ್ಲದೆ. ರಾಜಾರೋಷವಾಗಿ ಮಾದಕ ದೃವ್ಯಗಳ ಸೇವನೆ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಇಷ್ಟರವರಗೆ ಶಾಂತವಾಗಿದ್ದ ಈ ಪ್ರದೇಶದಲ್ಲಿ ಇದೀಗ ಹೆಂಗಸರು ನಡೆದಾಡುವುದಕ್ಕೂ ಹೆದರುವಂತಾಗಿದೆ. ದಿನ ದಿನವೂ ಹೊಸ ಮುಖಗಳು ಇಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಯಾವ ಹೊತ್ತಲ್ಲಿ ಏನು ನಡೆಯುತ್ತದೆ ಎಂಬ ಆತಂಕದಲ್ಲಿ ನಾವಿದ್ದೇವೆ. ಅದಲ್ಲದೆ ಮುಸ್ಲಿಂ ಕುಟುಂಬಗಳೇ ಇಲ್ಲದ ಈ ಭಾಗದಲ್ಲಿ ಪ್ರಾರ್ಥನಾ ಮಂದಿರ ನಿರ್ಮಿಸಲು ಸಂಚು ರೂಪಿಸುತ್ತಿದ್ದು, ಇದಕ್ಕೆ ಸ್ಥಳೀಯರಾದ ನಮ್ಮ ತೀವ್ರ ವಿರೋಧವಿದೆ. ಯಾವುದೇ ಕಾರಣಕ್ಕೆ ನಮ್ಮ ವಿರೋಧವನ್ನು ಲಕ್ಕಿಸದೆ ಪ್ರಾರ್ಥನಾ ಮಂದಿರವಾಗಲಿ, ಸಮಾರಂಭವಾಗಲಿ ನಡೆಸಲು ಮುಂದಾದರೆ ಕಾನೂನು ಹೋರಾಟ ಸಹಿತ ಕಾನೂನು ಕೈಗೆತ್ತಿಕೊಳ್ಳಲೂ ಸಿದ್ಧ” ಎಂಬುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭ ಹತ್ತಾರು ಮಂದಿ ಸ್ಥಳೀಯರು ಅವರೊಂದಿಗಿದ್ದರು.