ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷರ ಕರ್ತವ್ಯಲೋಪಕ್ಕೆ ನಾವು ಹೊಣೆಯೇ?

ಕಾಪು ಶಾಸಕ ಸೊರಕೆ ವಿರುದ್ಧ ಎಲ್ಲೂರು ಗ್ರಾ ಪಂ ಗುಡುಗು

ಕರಾವಳಿ ಅಲೆ  ವರದಿ

ಪಡುಬಿದ್ರಿ : “ನಮ್ಮದು ದುರಾಡಳಿತ ಎಂಬುದಾಗಿ ಪ್ರತಿಭಟಸಿ ದೂರುವ ಶಾಸಕ ಸೊರಕೆ ತನ್ನ ಕರ್ತವ್ಯ ಅರಿತುಕೊಳ್ಳಲಿ. ತಾನೇ ಸ್ವತಃ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷನಾಗಿದ್ದರೂ ನಮ್ಮ ಇಲ್ಲಿನ ನಿವೇಶನದ ಬಗ್ಗೆ ಯಾವುದೇ ಚಕಾರವೆತ್ತದೆ ಕರ್ತವ್ಯಲೋಪ ಎಸಗಿದ್ದು, ಅವರ ಕರ್ತವ್ಯ ನ್ಯೂನ್ಯತೆಗೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ” ಎಂದು ಎಲ್ಲೂರು ಗ್ರಾಮ ಪಂಚಾಯತ ಉಪಾಧ್ಯಕ್ಷ ಜಯಂತ್ ಕುಮಾರ್ ಗುಡುಗಿದ್ದಾರೆ.

ಕಾಪು ಪ್ರೆಸ್ ಕ್ಲಬ್ಬಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ನಮ್ಮದು ದುರಾಡÀಳಿತ ಎನ್ನುವ ಶಾಸಕರು ತಮ್ಮದೇ ಪಕ್ಷ ಆಡಳಿತದಲ್ಲಿರುವ ಸಂದರ್ಭ, ಅಂದಿನ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಯಶವಂತ ಶೆಟ್ಟಿ, ಸಂತೋಷ ಶೆಟ್ಟಿ ಹಾಗೂ ರಾಘವೇಂದ್ರ ಕುಲಾಲ್ ಎನ್ನುವವರು ಅಕ್ರಮವಾಗಿ ಗ್ರಾ ಪಂ ಕಟ್ಟಡದ ಹಿಂಭಾಗದ ಸರ್ಕಾರಿ ಜಾಗದ ಸುಮಾರು ಎರಡೂವರೆ ಎಕ್ರೆ ಪ್ರದೇಶದ ಮಣ್ಣನ್ನು ಗ್ರಾ ಪಂ ಗಮನಕ್ಕೆ ತಾರದೆ ಏಕಾಏಕಿ ಮಾರಾಟ ಮಾಡಿ ಸುಮಾರು 4 ಲಕ್ಷ ರೂ ನುಂಗಿ ನೀರು ಕುಡಿದಿದ್ದಾರೆ. ಅದರಲ್ಲಿ 50,000 ರೂ ಅಂದಿನ ಪಿಡಿಓ ಉಮೇಶ್ ದೇವಾಡಿಗ ಎನ್ನುವವರಿಗೆ ಲಂಚ ರೂಪದಲ್ಲಿ ನೀಡಿ ಬಾಯಿ ಮುಚ್ಚಿಸಿದ್ದು, ಇದು ಇಂದಿನ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮಾಡಿದ ದುರಾಡಳಿತವಲ್ಲವೇ..? ಪಟ್ಟಾ ಸ್ಥಳದ ಮಾಲಿಕರ ಗಮನಕ್ಕೆ ತಾರದೆ ರಸ್ತೆಗೆ ಗುದ್ದಲಿಪೂಜೆ ನಡೆಸಲು ಮುಂದಾದ ಶಾಸಕರನ್ನು ತಡೆದ ಸ್ಥಳದ ಮಾಲಕಿ ಮಹಿಳೆಯನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದು ದುರಾಡಳಿತವಲ್ಲವೆ..?” ಎಂದು ಪ್ರಶ್ನಿಸಿದ್ದಾರೆ.

“ಎಲ್ಲೂರು ಗ್ರಾಮ ಜನತೆಯ ಬಗ್ಗೆ ಕಪಟ ಪ್ರೀತಿ ಪ್ರದರ್ಶಿಸುತ್ತಿರುವ ಶಾಸಕರು ಗ್ರಾಮದ ಅಭಿವೃದ್ಧಿಗೆ ನೀಡಿದ ಕೊಡುಗೆ ಕೇವಲ 5 ಲಕ್ಷ ರೂ ಎನ್ನುವುದು ಮಾಹಿತಿ ಹಕ್ಕಿನಲ್ಲಿ ಬಹಿರಂಗಗೊಂಡಿದ್ದು ಇದು ದುರಾಡಳಿತವಲ್ಲವೇ..? ವಿವಾದಿತ ಯುಪಿಸಿಎಲ್ ಕಂಪೆನಿಯ ಸಿಎಸ್ಸಾರ್ ಜನಕ ನಾನೆಂಬುದಾಗಿ ಡಂಗುರ ಸಾರುತ್ತಿರುವ ಶಾಸಕರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಇವರು ಶಾಸಕನಾಗಿ ಆಯ್ಕೆಯಾಗುವ ಮೊದಲೇ ಎಲ್ಲೂರು ಗ್ರಾಮಕ್ಕೆ ಅಂದಿನ ಡೀಸಿ ರೇಜು ಮೂಲಕ ಕಂಪನಿಯಿಂದ ಸಿಎಸ್ಸಾರ್ ಅನುದಾನ ಬಿಡುಗಡೆಗೊಳಿಸಿದ್ದೇವೆ ಎಂಬುದು ಶಾಸಕರು ಅರಿತುಕೊಳ್ಳಲಿ. ಇದೇ ರೀತಿ ಶಾಸಕರು ತನ್ನ ಸರ್ವಾಧಿಕಾರ ಧೋರಣೆ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ದÀಕ್ಕೆ ತರುವ ಕೆಲಸ ಮುಂದುವರಿಸಿದರೆ ಗ್ರಾ ಪಂ ಸರ್ವ ಸದಸ್ಯರು ಸೇರಿ ಶಾಸಕರ ಕಚೇರಿ ಮುಂಭಾಗ ಧರಣಿ ನಡೆಸಬೇಕಾದೀತು” ಎಂದು ಎಚ್ಚರಿಸಿದ್ದಾರೆ. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಎಲ್ಲೂರು ಗ್ರಾ ಪಂ ಅಧ್ಯಕ್ಷೆ ವಸಂತಿ ಮಧ್ವರಾಜ್, ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮುಂತಾದವರಿದ್ದರು.

 

LEAVE A REPLY