ಕದ್ರಾದಲ್ಲಿ ಇಲಿಜ್ವರ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಕಾರವಾರ : ತಾಲೂಕಿನ ಕದ್ರಾ ರಾಜೀವನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇಲಿಜ್ವರ ಪ್ರಕರಣ ಪತ್ತೆಯಾಗಿರುವುದು ಆ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.

ಕೈಗಾದ ಅಣುವಿದ್ಯುತ್ ಘಟಕದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ನೂರಾರು ನೌಕರರಲ್ಲಿ ಬಹುತೇಕರು ಪರ ರಾಜ್ಯದವರಾಗಿದ್ದಾರೆ. ಅವರಲ್ಲಿ ಕೆಲವಷ್ಟು ನೌಕರರು ಕದ್ರಾದ ರಾಜೀವನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ವಾಸವಾಗಿದ್ದಾರೆ. ಹಾಗಾಗಿ ಹೊರವಲಯದಿಂದ ಬಂದಂತಹ ವ್ಯಕ್ತಿಗಳಿಂದ ಈ ಇಲಿಜ್ವರ ಹರಡಿರಬಹುದೆಂದು ಶಂಕಿಸಲಾಗಿದೆ. ಕೆಲವು ದಿನಗಳ ಹಿಂದೆ ಹಣಕೋಣದ ವ್ಯಕ್ತಿಯೊಬ್ಬ ಈ ಜ್ವರದಿಂದಲೇ ಮೃತಪಟ್ಟಿದ್ದಾನೆ. 4 ದಿನಗಳ ಹಿಂದೆ ಕದ್ರಾ ಸಮೀಪದ ವ್ಯಕ್ತಿಯೊಬ್ಬನಿಗೆ ಇಲಿಜ್ವರ ಕಾಣಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯಲು ಗೋವಾದ ಬಾಂಬೂಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೆ ಬುಧವಾರ ಕದ್ರಾ ರಾಜೀವನಗರದ ಮಹಿಳೆಗೆ ಇಲಿಜ್ವರ ಕಾಣಿಸಿಕೊಂಡಿದ್ದರಿಂದ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಾಗಿರುವುದು ತಿಳಿದುಬಂದಿದೆ.