ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದು ಸಹಸವಾರ ಮೃತ್ಯು

ಸಹಸವಾರನ ಮೇಲೆ ಕಂಬ ಬಿದ್ದಿರುವುದು

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ವಿದ್ಯುತ್ ಕಂಬದ ಮೇಲೆ ಮರವೊಂದು ಬಿದ್ದು, ಕಂಬ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಮಗುಚಿದ ಪರಿಣಾಮ ಬೈಕಿನಲ್ಲಿದ್ದ ಸಹಸವಾರ ಸ್ಥಳದಲ್ಲೇ ಮೃತಪಟ್ಟರೆ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ನಡೆದಿದೆ.

ನೆಟ್ಟಣದಿಂದ ಕಡಬ ಕಡೆಗೆ ತೆರಳುತ್ತಿದ್ದ ಕೊಂಬಾರು ನಿವಾಸಿಗಳಾದ ವಾಸುದೇವ ಎಂಬವರ ಪುತ್ರ ಮನೋಹರ್ (19) ಮೃತಪಟ್ಟಿದ್ದು, ದಿ ಸೆಲ್ವರಾಜು ಎಂಬವರ ಪುತ್ರ ಪ್ರಭಾಕರ್ ಗಂಭೀರ ಗಾಯಗೊಂಡಿದ್ದಾರೆ.

ರಾಜ್ಯ ಹೆದ್ದಾರಿಯ ಮರ್ದಾಳದಿಂದ ಕೈಕಂಬದವರೆಗೆ ಇಕ್ಕೆಲಗಳಲ್ಲಿ ದೂಪದ (ಹಾಲ್ಮಡ್ಡಿ) ಮರಗಳ ಬುಡಗಳನ್ನು ಟೊಳ್ಳಾಗಿಸಿ ಹಾಲ್ಮಡ್ಡಿ ಸಂಗ್ರಹಸಿದ ಬಳಿಕ ಹಾಗೇ ಬಿಟ್ಟ ಪರಿಣಾಮ ಮರಗಳು ಗಾಳಿ ಬಂದಾಗ ಧರೆಗುರುಳುತ್ತಿವೆ. ಕಳೆದ ಎರಡು ವರ್ಷಗಳಿಂದ ಅದೆಷ್ಟೋ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಅರಣ್ಯ ಇಲಾಖೆ ಕಾನೂನು ನೆಪವೊಡ್ಡಿ ಮರಗಳ ತೆರವು ಕಾರ್ಯಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆ ಬಳಿಕ ಅಧಿಕಾರಿಗಳು ಕೆಲ ಮರಗಳನ್ನು ತೆರವುಗೊಳಿಸಿದರು.