ವೃದ್ಧೆಯ ಕೈಕಾಲು ಕಟ್ಟಿ ಹಲ್ಲೆ

ಹೊಸೂರಿನಲ್ಲಿ ಅಮಾನವೀಯ ಘಟನೆ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಹಾಲು ತರೆಲೆಂದು ನಡೆದು ಹೋಗುತ್ತಿದ್ದ ವೃದ್ಧ ಮಹಿಳೆಯೊಬ್ಬರನ್ನು ಕೈ ಹಿಡಿದು ಎಳೆದೊಯ್ದು ಹಲ್ಲೆ ನಡೆಸಿ ಮನೆಯ ಕಂಬಕ್ಕೆ ಕಟ್ಟಿ ಹಾಕಿದ ಅಮಾನವೀಯ ಘಟನೆ ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಎಂಬಲ್ಲಿ ನಡೆದಿದೆ. ಹೊಸೂರಿನ ವನಜಾಕ್ಷಿ ಶೆಟ್ಟಿ ಹಲ್ಲೆಗೊಳಗಾದ ವೃದ್ಧೆ.

ವನಜಾಕ್ಷಿ ಶೆಟ್ಟಿ ಮಧ್ಯಾಹ್ನ ಹಾಲು ತರಲೆಂದು ಮನೆ ಸಮೀಪದ ಡೈರಿಗೆ ಹೋಗಿದ್ದಾಗ ಅಂಗಡಿಯ ಬಾಗಿಲು ತೆರದಿರಲಿಲ್ಲ ಎನ್ನಲಾಗಿದೆ. ಅದಕ್ಕಾಗಿ ಅವರು ಅಂಗಡಿ ಮುಂದೆ ನಿಂತಿದ್ದರು. ಈ ಸಂದರ್ಭ ಸ್ಥಳೀಯನಾದ ನಾಗರಾಜ ಶೆಟ್ಟಿ ಎಂಬಾತ ಮಹಿಳೆಗೆ ಅವಾಚ್ಯವಾಗಿ ನಿಂದಿಸಿ, ವೃದ್ಧೆಯ ಕೈ ಹಿಡಿದೆಳೆದು ಆತನ ಮನೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದಲ್ಲದೇ, ಮನೆಯ ಹೊರಗಿನ ಕಂಬಕ್ಕೆ ಕಟ್ಟಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ಸಂದರ್ಭ ವೃದ್ಧ ಮಹಿಳೆಯ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿದೆ. ಅಲ್ಲದೇ ಆಕೆಯ ಬಟ್ಟೆಗಳನ್ನು ಹರಿದು ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ಸಂದರ್ಭ ಆಕೆಯಲ್ಲಿದ್ದ ಮೊಬೈಲ್ ಫೋನನ್ನು ಕಿತ್ತುಕೊಳ್ಳಲಾಗಿದೆ ಎಂದು ಆಕೆ ಆರೋಪಿಸಿದ್ದು, ಗಾಯಗೊಂಡ ವನಜಾಕ್ಷಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷ ರಾಧಾದಾಸ್ ಪ್ರಕರಣವನ್ನು ಖಂಡಿಸಿದ್ದು, ಮಹಿಳೆಯರಿಗಾಗುತ್ತಿರುವ ಅನ್ಯಾಯ ದೌರ್ಜನ್ಯಗಳ ಬಗ್ಗೆ ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.