ಜೀಪು ಚಾಲಕ ಸ್ಥಳದಲ್ಲೇ ಸಾವು

ಅಪಘಾತದಲ್ಲಿ ನುಜ್ಜುಗುಜ್ಜಾದ ಜೀಪು

ಪಡೀಲ್ ಮೇಲ್ಸೇತುವೆ ಬಳಿ ಟಿಪ್ಪರ್ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು-ಬಂಟ್ವಾಳ ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಡೀಲ್ ಮೇಲ್ಸೇತುವೆ ಬಳಿ ಮಂಗಳವಾರ ಸಂಜೆ ಭೀಕರ ರಸ್ತೆ ದುರಂತ ಸಂಭವಿಸಿದ್ದು, ಜೀಪು ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೃತರನ್ನ ಮುಹಮ್ಮದ್ ಶಕೀಲ್ ಶರೀಫ್(35) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಉಡುಪಿ ಜಿಲ್ಲೆಯವರೆಂದು ತಿಳಿದು ಬಂದಿದೆ.

ಸೋಫಾ ಮತ್ತು ಬೆಡ್ಡುಗಳನ್ನು ತಯಾರಿಸುತ್ತಿದ್ದ ಶರೀಫ್ ಅವರು ಬಿ ಸಿ ರೋಡ್ ಕಡೆಯಿಂದ ಮಂಗಳೂರಿಗೆ ಜೀಪಿನಲ್ಲಿ ಬರುತ್ತಿದ್ದರು. ಇದೇ ವೇಳೆ ಮಂಗಳೂರಿನಿಂದ ಅಡ್ಯಾರ್ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಜೀಪಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದರಿಂದ ಜೀಪು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕ್ಕಿಯಾದ ಟಿಪ್ಪರ್
ಡಿಕ್ಕಿಯಾದ ಟಿಪ್ಪರ್

ಹೆದ್ದಾರಿ ಬ್ಲಾಕ್

ಪಡೀಲ್ ಮೇಲ್ಸೇತುವೆ ಬಳಿ ಭೀಕರ ಅಪಘಾತ ನಡೆಯುತ್ತಿದ್ದಂತೆ ರಸ್ತೆ ಪೂರ್ತಿ ಬ್ಲಾಕ್ ಆಗಿದೆ. ಯಾವುದೇ ವಾಹನ ಸಂಚಾರಕ್ಕೂ ತೆರಳಲು ಅಸಾಧ್ಯವಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ನಗರ ಠಾಣಾ ಪೊಲೀಸರು ವಾಹನ ಸಂಚಾರ ತೆರವಿಗೆ ಸಹಕರಿಸಿದರು. ಸುಮಾರು 1 ಗಂಟೆಗೂ ಅಧಿಕ ಕಾಲ ವಾಹನಗಳು ಬ್ಲಾಕ್ ಆಗಿದ್ದವು.