ಭಾರೀ ಮೊತ್ತದ ಠೇವಣಿ ಪಡೆದ ಹಲವು ಡಿಸಿಸಿ ಬ್ಯಾಂಕುಗಳಿಗೆ ಜಾರಿ ನಿರ್ದೇಶನಾಲಯ ದಾಳಿ

ಬೆಂಗಳೂರು : ಕೇಂದ್ರ ಸರಕಾರ ನೋಟು ಅಮಾನ್ಯೀಕರಣ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಹಲವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಭಾರೀ ಮೊತ್ತದ  ಠೇವಣಿ ಪಡೆದಿವೆಯೆಂಬ ಹಿನ್ನೆಲೆಯಲ್ಲಿ  ಶುಕ್ರವಾರದಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಗಾವಿ, ಬಾಗಲಕೋಟೆ, ಮೈಸೂರು ಹಾಗೂ ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕುಗಳಿಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಒಂದು ಬ್ಯಾಂಕಿನಲ್ಲಿ ರೂ 60 ಕೋಟಿ ಠೇವಣಿಯಿರಿಸಲಾಗಿದ್ದರೆ, ಇನ್ನೆರಡು ಬ್ಯಾಂಕುಗಳಲ್ಲಿ  100 ಕೋಟಿ ಹಾಗೂ ರೂ 200 ಕೋಟಿ ಠೇವಣಿಯರಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಭಾರೀ ಪ್ರಮಾಣದ ಠೇವಣಿಯಿಟ್ಟ ಖಾತೆದಾರರ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆಂದು ತಿಳಿದು ಬಂದಿದೆ.

ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ ತಂಡಗಳು ಭಾರೀ ಮೊತ್ತದ ಠೇವಣಿ ಪಡೆದಿವೆಯೆನ್ನಲಾದ ಇತರ ಬ್ಯಾಂಕುಗಳಾದ ದಕ್ಷಿಣ ಕನ್ನಡ, ಕೋಲಾರ, ಮಂಡ್ಯ, ಬಳ್ಳಾರಿ, ಶಿವಮೊಗ್ಗ ಜಲ್ಲಾ ಸಹಕಾರಿ ಬ್ಯಾಂಕುಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಲಿದೆಯೆಂದು ತಿಳಿದು ಬಂದಿದೆ.

ಅಕ್ಟೋಬರ್ 1ರಿಂದ ಡಿಸೆಂಬರ್ 19ರತನಕ ಪಡೆದಿರುವ ಠೇವಣಿಗಳ ಬಗೆ ಮಾಹಿತಿ ನೀಡುವಂತೆ ನಿರ್ದೇಶನಾಲಯ ಈ ಹಿಂದೆ ಅಪೆಕ್ಸ್ ಬ್ಯಾಂಕ್ ಮುಖ್ಯಸ್ಥರಿಗೆ ನೊಟೀಸ್ ಜಾರಿಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನೋಟು ಅಮಾನ್ಯೀಕರಣಗೊಂಡ ಮೊದಲ ಆರು ದಿನಗಳಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಭಾರೀ ಮೊತ್ತದ ಠೇವಣಿಯಿರಿಸಿರುವುದು ಪತ್ತೆಯಾಗುತ್ತಿದ್ದಂತೆಯೇ ಹಳೆ ನೋಟುಗಳನ್ನು ಸ್ವೀಕರಿಸದಂತೆ ಸಹಕಾರಿ ಬ್ಯಾಂಕುಗಳಿಗೆ ನವೆಂಬರ್ 14ರಂದು ರಿಸರ್ವ್ ಬ್ಯಾಂಕ್ ಆದೇಶ ನೀಡಿತ್ತು.