ಜಿಲ್ಲೆಯ ಮರಳುಗಾರಿಕೆಗೆ ಶೀಘ್ರ ಪರವಾನಗಿ ನೀಡಲು ಒತ್ತಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಮರಳುಗಾರಿಕೆ ಮತ್ತು ಸಾಗಾಟ ಇನ್ನೂ ಪ್ರಾರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಹೊಣೆ ಹೊತ್ತುಕೊಳ್ಳಬೇಕು. 2014ರ ಮೊದಲು ಮರಳುಗಾರಿಕೆ ಸಾಂಪ್ರದಾಯಿಕವಾಗಿ ನಡೆಸುತ್ತಿದ್ದ ಸ್ಥಳೀಯರಿಗೆ ಶೀಘ್ರ ಪರವಾನಗಿ ನೀಡಿ, ಮರಳು ಲಭ್ಯವಿಲ್ಲದೆ ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿ ಮತ್ತೆ ಆರಂಭ ಮಾಡಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಆಗಸ್ಟ್ 18ರಂದು ರಾಷ್ಟ್ರೀಯ ಹಸಿರುಪೀಠದಿಂದ ಮರಳುಗಾರಿಕೆಗೆ ಅನುಮತಿ ನೀಡಿದ್ದು, ಭೂವಿಜ್ಞಾನ ಮತ್ತು ಗಣಿ ಇಲಾಖೆ ಹಾಗೂ ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ಮರಳುಗಾರಿಕೆ ನಡೆಸುವವರಿಗೆ ಪರವಾನಿಗೆ ನೀಡಲು ಅಸಮರ್ಥವಾಗಿದೆ ಎಂದು ಸಂಘವು ಅಸಮಾಧಾನ ವ್ಯಕ್ತಪಡಿಸಿದೆ. ಪರವಾನಗಿ ನೀಡಲು ವಿಳಂಬ ಮಾಡುತ್ತಿರುವ ಇಲಾಖೆಗೆ ಮರಳು ಮಾಫಿಯಾದ, ರಾಜಕಾರಣಿಗಳ ಒತ್ತಡವಿದೆಯೋ ಅಥವಾ ನುರಿತ ಅಧಿಕಾರಿಗಳ ಕೊರತೆ ಇದೆಯೋ ಗೊತ್ತಾಗುತ್ತಿಲ್ಲ. ಕಳೆದ ಬಾರಿ ಜಿಲ್ಲಾಡಳಿತ ಪರವಾನಿಗೆ ನೀಡುವಾಗ ಅರ್ಹರಲ್ಲದವರಿಗೆ ನೀಡಿದ್ದು, ಅದರಲ್ಲಿ ರಾಜಕಾರಣಿಗಳು, ಸರಕಾರಿ ನೌಕರರು, ಕಾರ್ಪೊರೇಟರುಗಳು, ಅನಿವಾಸಿ ಭಾರತೀಯರೂ ಸೇರಿದ್ದರು. ಆದ್ದರಿಂದ ಈ ಬಾರಿ ಅರ್ಹರಿಗೆ ಮಾತ್ರ ಪರವಾನಿಗೆ ನೀಡಬೇಕು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.