ಮೃತ ಡಿವೈಎಸ್ಪಿ ಗಣಪತಿ ಪುತ್ರ ಸಹಿತ ಐವರು ಪೊಲೀಸ್ ವಶಕ್ಕೆ

ಪೊಲೀಸ್ ವಶದಲ್ಲಿರುವ ಆರೋಪಿಯೊಬ್ಬನ ಬೈಕ್

ಸರ್ಕಾರಿ ಬಸ್ ಚಾಲಕಗೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ದ್ವಿಚಕ್ರ ವಾಹನದಲ್ಲಿ ಬೆನ್ನಟ್ಟಿ ಬಂದ ಯುವಕರ ತಂಡವೊಂದು ಸರ್ಕಾರಿ ರಾಜಹಂಸ ಬಸ್ಸನ್ನು ಪಡುಬಿದ್ರಿ ಬಾವ್ಯ ಪೆಟ್ರೋಲ್ ಬಂಕ್ ಬಳಿ ತಡೆದು ನಿಲ್ಲಿಸಿ, ಚಾಲಕಗೆ ಹಲ್ಲೆ ನಡೆಸಿದ್ದಲ್ಲದೆ ತಡೆಯಲು ಬಂದ ನಿರ್ವಾಹಕ, ಹೆಚ್ಚುವರಿ ಚಾಲಕಗೂ ಹಲ್ಲೆ ನಡೆಸಿ ಗಾಯಗೊಳಿಸಿದ್ದ ತಂಡದ ಒಬ್ಬ ಸದಸ್ಯರನ್ನು ಪ್ರಾಯಾಣಿಕರೇ ಹಿಡಿದು ಪಡುಬಿದ್ರಿ ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ಮುಂಜಾನೆ 4-30ರ ಸುಮಾರಿಗೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಪ್ರಕರಣದ ಕೊಡಗಿನ ಡಿವೈಎಸ್ಪಿ ಗಣಪತಿ ಪುತ್ರ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಘಟನೆಯಿಂದ ಗಾಯಗೊಂಡವರು ಚಾಲಕ ಗಿರೀಶ್, ನಿರ್ವಾಹಕ ನಾಗರಾಜ್ ಶೆಟ್ಟಿ ಹಾಗೂ ಹೆಚ್ಚುವರಿ ಚಾಲಕ ಜತ್ತಪ್ಪ. ಪೊಲೀಸ್ ವಶದಲ್ಲಿದ್ದವರು ಗಣಪತಿ ಪುತ್ರ ನಿಹಾಲ್, ಕೌಶಿಕ್, ಜೋವಿಯಲ್, ಚಿಂತನ್ ಹಾಗೂ ಹಿತೇಶ್ ಇವರು ಹದಿನೆಂಟು ಹತ್ತೊಂಭತ್ತು ವಯಸ್ಸಿನ ಆಸುಪಾಸಿನವರಾಗಿದ್ದು, ಮಂಗಳೂರಿನ ಖಾಸಗಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

“ಬೆಂಗಳೂರಿನಿಂದ ಭಟ್ಕಳಕ್ಕೆ ಪ್ರಯಾಣಿಸುತ್ತಿದ್ದ ರಾಜಹಂಸ ಬಸ್ ಸುರತ್ಕಲ್ಲಿನಲ್ಲಿ ಬರುತ್ತಿರುವ ವೇಳೆ ದ್ವಿಚಕ್ರ ವಾಹನಗಳಲ್ಲಿ ಜಾಲಿ ರೈಡ್ ಮಾಡಿಕೊಂಡು ಬರುತ್ತಿದ್ದ ಯುವಕರ ತಂಡವೊಂದನ್ನು ಕಂಡ ನಾನು ದಾರಿಗಾಗಿ ಧ್ವನಿ ಮಾಡಿದರೂ ಕೇಳದಂತ್ತಿದ್ದರಿಂದ ಮತ್ತೆ ಹಾರನ್ ಹಾಕಿದಾಗ ದಾರಿಬಿಟ್ಟಿದ್ದರಿಂದ ಬಸ್ ಮುಂದೆ ಚಲಿಸಿದೆ, ಬಸ್ ಪಡುಬಿದ್ರಿ ತಲುಪುತ್ತಿದಂತೆ ಬಸ್ಸನ್ನು ತಂಡ ತಡೆದು ನಿಲ್ಲಿಸಿದ್ದು, ಯುವಕರು ಕುಡಿದ ದುರ್ವಾಸನೆ ಬರುತ್ತಿದ್ದು ನನ್ನನ್ನು ಹಿಡಿದು ಬಟ್ಟೆಯೆಲ್ಲಾ ಹರಿದು ಹಾಕಿದ್ದಲ್ಲದೆ ಬೇಕಾಬಿಟ್ಟಿ ಥಳಿಸಿದ್ದಾರೆ. ಅದನ್ನು ತಡೆಯಲು ಬಂದ ಸಹಪಾಠಿಗಳಿಗೂ ಹಲ್ಲೆ ಮಾಡಿದಾಗ ಬಸ್ಸಿನಲ್ಲಿ ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರಲ್ಲಿ ವಕೀಲರು ಹಾಗೂ ಡ್ಯೂಟಿ ಮೇಲೆ ಪ್ರಯಾಣಿಸುತ್ತಿದ್ದ ಇಬ್ಬರು ಪೊಲೀಸ್ ಸಹಿತ ಬಸ್ ಚಾಲಕನಾದ ನನ್ನ ಸಹಾಯಕ್ಕೆ ಬಂದು ಹಲ್ಲೆ ನಡೆಸಿದ ತಂಡದಲ್ಲಿದ್ದ ಒಬ್ಬನನ್ನು ಹಿಡಿದು ಬಸ್ಸಿನಲ್ಲಿ ಕೂರಿಸಿ ಪೊಲೀಸ್ ಠಾಣೆಗೆ ಮುಟ್ಟಿಸಿದ್ದಾರೆ” ಎಂಬುದಾಗಿ ಬಸ್ ಚಾಲಕ ಗಿರೀಶ್ ಘಟನೆಯನ್ನು ವಿವರಿಸಿದ್ದಾರೆ.

ಈ ಘಟನೆಯನ್ನು ಕಣ್ಣಾರೆ ಕಂಡ ಪ್ರಯಾಣಿಕರು ಹೇಳುವಂತೆ ಡ್ರಗ್ಸ್ ವ್ಯಸನಿಗಳಂತೆ ವರ್ತಿಸುತ್ತಿರುವ ಈ ಯುವಕರು ಬಹುತೇಕ ಶ್ರೀಮಂತ ಮನೆತನದವರಂತೆ ಕಾಣಿಸುತ್ತಿದ್ದು, ರಾತ್ರಿ ಹೊತ್ತು ಎಲ್ಲಿದ್ದರು. ಈ ಅಪರಾತ್ರಿಯಲ್ಲಿ ಎಲ್ಲಿಂದ ಬರುತ್ತಿದ್ದರು ಎಂಬುದನ್ನು ಪೊಲೀಸರು ತನಿಖೆ ಮಾಡಬೇಕಾಗಿದ್ದು, ಇಂಥ ಪ್ರಕರಣಗಳು ಮರುಕಳಿಸದಂತೆ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿದ್ದಾರೆ.

ಆರೋಪಿ ಯುವಕರು ಪೊಲೀಸ್ ಠಾಣೆಯಲ್ಲಿದ್ದು ಇದೀಗ ತಾವು ಮಾಡಿದ ತಪ್ಪಿನಿಂದ ಮರುಗುತ್ತಿದ್ದು, ನಮಗೆ ಕಾಲೇಜಿನಲ್ಲಿ ಪರೀಕ್ಷೆ ಇದೆ ಪರೀಕ್ಷೆ ಮುಗಿಸಿ ಬರುತ್ತೇವೆ ಎಂಬುದಾಗಿ ಪೊಲೀಸರಲ್ಲಿ ಕೇಳಿಕೊಳ್ಳುತ್ತಿದ್ದರಾದರೂ, ಅವರ ಮೇಲೆ ದೂರು ದಾಖಲಾಗಿದ್ದರಿಂದ ಪೊಲೀಸರು ಅಸಾಹಯಕರಾಗಿದ್ದರು. ಯಾವುದೇ ವ್ಯಾಪಾರ ಕೇಂದ್ರಗಳಿಗೂ ಇಲ್ಲದ ಕಾನೂನು ಕೇವಲ ಕಾಫಿ ಡೇ ಗಳಿಗಿದ್ದು ರಾತ್ರಿ ಸಮಯ ಕೂಡಾ ಕಾರ್ಯಾಚರಿಸುವುದರಿಂದ ಇಂಥ ಯುವಕರು ದಾರಿ ತಪ್ಪುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತೀವ್ರ ನಿಗಾ ವಹಿಸುವಂತೆ ಸಾರ್ವಜನಿಕರು ಇಲಾಖೆಯನ್ನು ಎಚ್ಚರಿಸಿದ್ದಾರೆ.