ವಿಚಾರಣೆಗೆ ಹಾಜರಾಗದ ಪತ್ನಿ , ತಂದೆ, ಸಹೋದರ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ

ವಿಶೇಷ ವರದಿ

 ಬೆಂಗಳೂರು : ಕಳೆದ ವರ್ಷದ ಜುಲೈ 7ರಂದು ಮಡಿಕೇರಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೈದಿದ್ದ ಮಂಗಳೂರು ಐಜಿ (ಪಶ್ಚಿಮ ವಲಯ) ಕಚೇರಿಯಲ್ಲಿ ಡಿವೈಎಸ್ಪಿ ಆಗಿದ್ದ ಎಂ ಕೆ ಗಣಪತಿ ಪ್ರಕರಣದ ತನಿಖೆ ನಡೆಸುತ್ತಿರುವ  ನ್ಯಾಯಮೂರ್ತಿ ಕೇಶವನಾರಾಯಣ ನೇತೃತ್ವದ ವಿಚಾರಣಾ ಆಯೋಗದ ಮುಂದೆ ದೊಡ್ಡ ಸವಾಲೊಂದು ಎದುರಾಗಿದೆ.

ಸಿಐಡಿ ವರದಿಯಲ್ಲಿ ಉಲ್ಲೇಖಗೊಂಡ ಎಲ್ಲಾ 38 ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆಯಾದರೂ  ಗಣಪತಿಯ ಒಬ್ಬ ಸೋದರ ತಮ್ಮಯ್ಯ ಅವರನ್ನು ಹೊರತುಪಡಿಸಿ ಇತರ ಸಂಬಂಧಿಕರ್ಯಾರೂ  ಸಾಕ್ಷ್ಯ ನುಡಿಯಲು ಮುಂದೆ ಬರುತ್ತಿಲ್ಲ.  ಗಣಪತಿ ತಂದೆ  ಕುಶಾಲಪ್ಪ, ಸಹೋದರ ಮಾಚಯ್ಯ ಹಾಗೂ ಪತ್ನಿ ಪಾವನಾಗೆ ವಿಚಾರಣೆಗೆ ಹಾಜರಾಗುವಂತೆ ಆಯೋಗ ಸಮನ್ಸ್ ಕಳುಹಿಸಿತ್ತಾದರೂ ಅವರ್ಯಾರೂ ತಮ್ಮ ನಿವಾಸಗಳಲ್ಲಿ ಲಭ್ಯರಿಲ್ಲದ ಕಾರಣ ಸಮನ್ಸ್ ಮತ್ತೆ ಆಯೋಗದ ಕಚೇರಿಗೆ  ಹಿಂದೆ ಬಂದಿದೆ.

ಗಣಪತಿ ತಂದೆ ಕೊಡಗು ಜಿಲ್ಲೆಯ ರಂಗನಸಮುದ್ರ ನಿವಾಸಿಯಾಗಿದ್ದರೆ ಈಗ ಅವರ ಮನೆಯಲ್ಲಿ ಯಾರೂ ಇಲ್ಲ. ಅಂತೆಯೇ ಮಂಗಳೂರಿನಲ್ಲಿ ನೆಲೆಸಿದ್ದ ಅವರ ಪತ್ನಿ ಪಾವನಾ ಹಾಗೂ ಪುತ್ರ ನೇಹಾಲ್ ಕೂಡ ತಾವು ನೀಡಿದ್ದ ವಿಳಾಸದಲ್ಲಿಲ್ಲ. ಇದರಿಂದ ವಿಚಾರಣೆಗೆ ತೀವ್ರ ತೊಡಕಾಗಿದೆ ಎಂದು ತಿಳಿದು ಬಂದಿದೆ.

ಆಯೋಗ ಈಗಾಗಲೇ ಗಣಪತಿ ಆತ್ಮಹತ್ಯೆಗೈದಿದ್ದ ಲಾಡ್ಜಿನ ಎಲ್ಲಾ ಸಿಬ್ಬಂದಿ ಹಾಗೂ ಸಂಬಂಧಿತ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಿದೆ.

ಭಾರೀ ರಾಜಕೀಯ ಸಂಚಲನ ಮೂಡಿಸಿದ್ದ ಈ ಪ್ರಕರಣವನ್ನು ಆರಂಭದಲ್ಲಿ ತನಿಖೆ ನಡೆಸಿದ್ದ ಸಿಐಡಿ `ಬಿ’ ರಿಪೋರ್ಟ್ ಸಲ್ಲಿಸಿತ್ತು.