ವಂಶಾಡಳಿತ ಕಾಂಗ್ರೆಸ್ ಪಕ್ಷಕ್ಕೆ ಮಾರಕ

ವಂಶಾಳ್ವಿಕೆಯಿಂದಾಗಿ ಕಾಂಗ್ರೆಸ್ ಪಕ್ಷ ಶಾಶ್ವತವಾಗಿ ಅವನತಿಯ ಹಾದಿ ಹಿಡಿದಿದೆ ಎಂದು ಹಲವರು ಅಂದುಕೊಂಡಿರುವುದು ಸುಳ್ಳಲ್ಲ .

  • ಕರ್ನಲ್ ಅನಿಲ್ ಎ ಅಥಾಳೆ

ರಾಜಕೀಯ, ಬಾಲಿವುಡ್ ಹಾಗೂ ಕ್ರಿಕೆಟ್ – ಎಲ್ಲಾ ವಿಧಗಳಲ್ಲಿಯೂ ಈ ಮೂರು ವೃತ್ತಿಗಳೂ ಅತ್ಯಂತ ಆಕರ್ಷಣೀಯ. ಆದರೆ ಎಲ್ಲಾ ಮೂರು ರಂಗಗಳಲ್ಲಿಯೂ ಸ್ವಜನಪಕ್ಷಪಾತ ಸಾಮಾನ್ಯವಾಗಿದ್ದು, ವಂಶಾವಳಿಗಳೇ ಹಕ್ಕುಸ್ಥಾಪನೆ ಮಾಡಿಕೊಂಡಿವೆ.

ಹಣ, ಖ್ಯಾತಿಯ ಬೆಂಬತ್ತಿರುವಂತಹ ಹೆತ್ತವರು ಕೂಡ ತಮ್ಮ ಮಕ್ಕಳು ಈ ಮೂರು ಕ್ಷೇತ್ರಗಳ ಪೈಕಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಲಿ ಎಂದು ಬಯಸುತ್ತಾರೆ. ಸಾಂಪ್ರದಾಯಿಕ ಸಮಾಜಗಳಲ್ಲಿ  ಮಕ್ಕಳು ತಮ್ಮ ಹೆತ್ತವರ ವೃತ್ತಿಯನ್ನೇ ಅನುಸರಿಸುವುದು ಸಹಜ. ಆಗ ಆಯ್ಕೆಗಳೂ ವಿರಳವಾಗಿದ್ದವು, ಕೃಷಿ ಕೇಂದ್ರಿತ ಸಮಾಜದಲ್ಲಿ ಒಂದು ವೃತ್ತಿಯಲ್ಲಿ ಒಬ್ಬ ಸಾಧಿಸಿದ ನೈಪುಣ್ಯ ಆಗ ಬಹಳಷ್ಟು ಅಮೂಲ್ಯವಾಗಿತ್ತು.

ಆದರೆ ಕೈಗಾರಿಕಾ ಯುಗದಲ್ಲಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಯಿಂದಾಗಿ ಎಲ್ಲವೂ ಬದಲಾಗಿ ಹೋಯಿತಲ್ಲದೆ ವೃತ್ತಿ ಆಯ್ಕೆ ವಿಚಾರಗಳಲ್ಲೂ ಬಹಳಷ್ಟು ಬದಲಾವಣೆಗಳಾದವು.

ಸಮಾನತೆ ಮತ್ತು ಭ್ರಾತತ್ವವನ್ನು ಸಾರಿ ಹೇಳುವ ಪ್ರಜಾಪ್ರಭುತ್ವ ದೇಶದಲ್ಲೂ ಸಮಾಜದಲ್ಲಿ ಹಲವಾರು ವಂಶಾಡಳಿತಗಳಿವೆಯೆಂಬುದನ್ನು ಅಲ್ಲಗಳೆಯಲಾಗದು. ಪ್ರತಿ ಬಾರಿ ಸ್ಥಳೀಯಾಡಳಿತಗಳಿಂದ ಹಿಡಿದು ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ನಮ್ಮ ನಗರಗಳ ಸುತ್ತಲೂ ಇಂತಹ ವಂಶಾಡಳಿತಗಳ ಕುರುಹುಗಳಿವೆ.

ಒಂದು ಶತಮಾನದ ಹಿಂದೆ ಕೂಡ ಮಾಡಿರಬಹುದಾದ ತ್ಯಾಗಗಳನ್ನು ಉಲ್ಲೇಖಿಸಿ ಮೊಮ್ಮಗಂದಿರು ಅಧಿಕಾರ ಪಡೆಯಲು ಹವಣಿಸುತ್ತಾರೆ. ಅವರ ಹೆತ್ತವರಿಗೆ ಹಣ, ಅಧಿಕಾರ ಹಾಗೂ ಪಕ್ಷದ ಮೇಲೆ ಹೊಂದಿರುವ ಹಿಡಿತವೇ ಇಂತಹ ಪ್ರವೃತ್ತಿಗೆ ಕಾರಣ.

ಸ್ವಾತಂತ್ರ್ಯ ಸಂಗ್ರಾಮದ ವೇಳೆ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷದಲ್ಲಿ ಈಗ ಇರುವ ಶೇ 70ರಷ್ಟು ಶಾಸಕರು ವಂಶಾಡಳಿತಗಳಿಂದಲೇ ಬಂದವರು. ಯಾವುದೇ ಪಾಳೆಗಾರಿಕೆ ಪದ್ಧತಿಯಲ್ಲಿದ್ದಂತೆ ಇಲ್ಲಿ ತಂದೆಯ ನಂತರ ಮಗನೇ ಆ ಸ್ಥಾನಕ್ಕೆ ಸ್ಪರ್ಧಿಸುತ್ತಾನೆ. ಪ್ರಧಾನಿಯ ಹುದ್ದೆ ಮಾತ್ರ ಒಂದು ಕುಟುಂಬಕ್ಕೆ ಮೀಸಲಾಗಿಲ್ಲ, ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪಕ್ಷಗಳ ರಾಜ್ಯ ಘಟಕಗಳ ಅಧ್ಯಕ್ಷರುಗಳ ವಿಚಾರದಲ್ಲಿಯೂ ಇದನ್ನೇ ಹೇಳಬಹುದು.

ವಂಶಾಡಳಿತದ ವಿಚಾರ ಒಂದು ಪಕ್ಷದ ಆಂತರಿಕ ವಿಚಾರವಾಗಬಹುದಾದರೂ ಇದಕ್ಕೆ ಹೆಚ್ಚಿನ ಪರಿಣಾಮಗಳಿವೆ. ಸ್ವಜನಪಕ್ಷಪಾತ ಹೆಚ್ಚಾದಾಗ, ಅರ್ಹತೆಗೆ ಬೆಲೆಯೇ ಇಲ್ಲದಂತಾಗಿ ಪಕ್ಷಗಳಿಂದ ಜನರು ವಲಸೆ ಹೋಗುವುದು ಸಾಮಾನ್ಯ.

ಇಂದು ದೇಶದ ಮುಖ್ಯ ವಿಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ವಂಶಾಡಳಿತ ಸರಿಯಲ್ಲ. ಅದೇ ರೀತಿ ಕ್ರಿಕೆಟ್ ಕ್ಷೇತ್ರದಲ್ಲೂ ಸ್ವಜನಪಕ್ಷಪಾತ ನೆಲೆಯೂರಿದಾಗ ದೇಶ ಒಂದೆರಡು ಪಂದ್ಯಗಳನ್ನು ಸೋಲಬಹುದು. ಬಾಲಿವುಡ್ಡಿನ ವಿಚಾರದಲ್ಲಿ ಹೇಳುವುದಾದರೆ ಈ ವಂಶಾಡಳಿತದಿಂದಾಗಿ ನಮ್ಮ ಮೇಲೆ ಒಂದು ಕೆಟ್ಟ ಚಲನಚಿತ್ರವನ್ನೂ ಹೇರುವ ಸಾಧ್ಯತೆಯಿದೆ.

ಆದರೆ ರಾಜಕಾರಣದಲ್ಲಿ ಇಂತಹ ವಂಶಾಡಳಿತ ಗಂಭೀರ ಪರಿಣಾಮ ಬೀರಬಹುದು.90ರ ದಶಕದಲ್ಲಿ ಭಾರತದಲ್ಲಿ ರಾಜಕೀಯ ಅಸ್ಥಿರತೆಯಿತ್ತು. ವಂಶಾಡಳಿತದಿಂದ ಹೊರತಾದ ಪ್ರಧಾನಿಗಳು ದೇಶವನ್ನು ಅಲ್ಪ ಸಮಯ ಆಳಿದ್ದರು. ಅವರಿಗೆ ಸ್ಪಷ್ಟ ಬಹುಮತವಿಲ್ಲದೇ ಇದ್ದರೂ ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸಿದ ನಂತರ ಅವರು ಪರಿಣಾಮಕಾರಿ ಆಡಳಿತ ನೀಡಿದ್ದರು.

ಇದೇ ಕಾರಣದಿಂದ ವಂಶಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಪಕ್ಷವು ಚಂದ್ರಶೇಖರ್, ಐ ಕೆ ಗುಜ್ರಾಲ್ ಹಾಗೂ ಎಚ್ ಡಿ ದೇವೇಗೌಡ ಅವರಿಂದಾಗಿ ರಾಜಕೀಯದಲ್ಲಿ ವಿಭಿನ್ನ ವಾತಾವರಣ ಉಂಟಾಗಿತ್ತು.

ಕಾಂಗ್ರೆಸ್ ಪಕ್ಷ ಕೇವಲ ವಂಶಾಡಳಿತಕ್ಕೆ ಮಣೆ ಹಾಕುತ್ತಿರುವುದು ಮಾತ್ರವಲ್ಲ ಪ್ರಮುಖ ಹುದ್ದೆಗಳನ್ನು ಇಂಥವರಿಗೆ ನೀಡಿ ದೇಶದ ಹಿತಾಸಕ್ತಿಗಳನ್ನು ಪಣವಾಗಿರಿಸಿದೆ.

ವಂಶಾಳ್ವಿಕೆಯಿಂದಾಗಿ ಕಾಂಗ್ರೆಸ್ ಪಕ್ಷ ಶಾಶ್ವತವಾಗಿ ಅವನತಿಯ ಹಾದಿ ಹಿಡಿದಿದೆ ಎಂದು ಹಲವರು ಅಂದುಕೊಂಡಿರುವುದು ಸುಳ್ಳಲ್ಲ.