ಗ್ರಾಮೀಣ ಬ್ಯಾಂಕ್ ಮಧೂರು ಶಾಖೆಗೆ ಮೆರವಣಿಗೆ, ಧರಣಿ

ಡಿ ವೈ ಎಫ್ ಐ ಪ್ರತಿಭಟನಾ ಧರಣಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : 500 ಹಾಗೂ 1000 ರೂ ನೋಟುಗಳನ್ನು ಕೇಂದ್ರ ಸರಕಾರ ಅಮಾನ್ಯಗೊಳಿಸಿದ ಬಳಿಕ ಸಾಮಾನ್ಯ ಜನತೆಗೆ ಬ್ಯಾಂಕುಗಳಲ್ಲಿ ಹಣ ಲಭಿಸದೇ ಇರುವ ದುಸ್ಥಿತಿಯನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ಹಾಗೂ ನೌಕರರ ನಿಲುವನ್ನು ಪ್ರತಿಭಟಿಸಿ ಕೂಡಲೇ ಇದಕ್ಕೊಂದು ಪರಿಹಾರವನ್ನು ಕಲ್ಪಿಸಲು ಡಿ ವೈ ಎಫ್ ಐ ಮಧೂರು ಶಾಖೆಯ ವತಿಯಿಂದ ಕೇರಳ ಗ್ರಾಮೀಣ ಬ್ಯಾಂಕ್ ಮಧೂರು ಶಾಖೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಿತು.

ಡಿ ವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಕೆ ಮಣಿಕಂಠನ್ ಧರಣಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಬ್ಯಾಂಕಿನ ಕೆಲವೊಂದು ಅಧಿಕಾರಿಗಳು ಹಾಗೂ ನೌಕರರು ಅವರಿಗೆ ಬೇಕಾದ ರೀತಿಯಲ್ಲಿ ಸ್ವಜನ ಪಕ್ಷಪಾತವನ್ನು ಅನುಸರಿಸುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಾಮಾನ್ಯ ಜನತೆ ಬ್ಯಾಂಕಿಗೆ ಹೋದರೆ ಅಸಡ್ಡೆಯಿಂದ ಮಾತನಾಡುತ್ತಿರುವ ಬ್ಯಾಂಕ್ ಅಧಿಕಾರಿಗಳು ತಮ್ಮ ವರ್ತನೆಯಲ್ಲಿ ಬದಲಾವಣೆಗಳನ್ನು ತರದೇ ಇದ್ದರೆ ಪ್ರತಿಭಟಿಸಲಾಗುವುದು”  ಎಂಬುದಾಗಿ ಗುಡುಗಿದರು. ನೇತಾರರ ಸಹಿತ ಹಲವಾರು ಮಂದಿ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.