ಸರಕಾರಿ ಬಸ್ ಓಡಿಸಲು ಆಗ್ರಹಿಸಿ ಡಿಫಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರಿನಿಂದ ಮೊಂಟೆಪದವು ಮೂಲಕ ಮುಡಿಪುವಿನವರೆಗೆ ಸರಕಾರಿ ಬಸ್ ಓಡಿಸಬೇಕೆಂದು ಆಗ್ರಹಿಸಿ ಡಿವೈಎಫೈ ಮತ್ತು ನಾಗರಿಕರ ವತಿಯಿಂದ ತೌಡುಗೋಳಿ ಕ್ರಾಸಿನಲ್ಲಿ ಸೋಮವಾರ ಬೃಹತ್ ಹಕ್ಕೊತ್ತಾಯ ಸಮಾವೇಶ ಜರುಗಿತು.

ಡಿವೈಎಫೈ ಜಿಲ್ಲಾ ಅಧ್ಯಕ್ಷ ಬಿ ಕೆ ಇಮ್ತಿಯಾಝ್ ಮಾತನಾಡಿ, “ಮುಂದಿನ ದಿನಗಳಲ್ಲಿ ಸರಕಾರಿ ಬಸ್ ಬಾರದೇ ಇದ್ದಲ್ಲಿ ಮುಂದೆ ವಾಹನಗಳನ್ನು ತಡೆದು, ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿ ಉಗ್ರ ರೀತಿಯಲ್ಲಿ ಪ್ರತಿಭಟಿಸಲಾಗುವುದು” ಎಂದು ಎಚ್ಚರಿಸಿದರು.

“ಮಂಜನಾಡಿ ಭಾಗದಲ್ಲಿ ಸರಕಾರಿ ಬಸ್ಸಿಗೆ ಒತ್ತಾಯಿಸಿ ಹಲವು ಪ್ರತಿಭಟನೆಗಳನ್ನು ಈಗಾಗಲೇ ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ, ಈ ಭಾಗದಲ್ಲಿ ಓಡುತ್ತಿರುವ ಖಾಸಗಿ ಬಸ್ ಮಾಲಿಕರ ಲಾಬಿಯಿಂದಾಗಿ  ಸರಕಾರಿ ಬಸ್ ರಸ್ತೆಗೆ ಇಳಿಯುತ್ತಿಲ್ಲ. ಆರ್ಟಿಒ ಅಧಿಕಾರಿಗಳು ಕೂಡಾ ಇತ್ತ ಗಮನ ಹರಿಸಬೇಕು” ಎಂದು ಆಗ್ರಹಿಸಿದರು.

“ಈ ಭಾಗದಲ್ಲಿ ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆ ಹಾಗೂ ವಿವಿಧ ಉದ್ದಿಮೆಗಳು ನೆಲೆಯೂರಿವೆ. ಜನದಟ್ಟಣೆಯೂ ಹೆಚ್ಚಿದ್ದು, ಈ ಭಾಗದಿಂದ ಅನೇಕ ಜನ ಕೆಲಸಕ್ಕೆ ಮತ್ತು ಶಿಕ್ಷಣಕ್ಕೆ ಮಂಗಳೂರಿಗೆ ಹೋಗುವವರಿದ್ದಾರೆ. ಆದರೆ ಖಾಸಗಿ ಬಸ್ಸುಗಳದ್ದೇ ಅಧಿಪತ್ಯ ಸದ್ಯ ಇದ್ದ ಕಾರಣ ಸರಕಾರಿ ಬಸ್ ಮರೀಚಿಕೆಯಾಗಿದೆ” ಎಂದರು.

“ಕಂಡಕ್ಟರುಗಳಿಗೆ ಬೇಕಾದಂತೆ ಟ್ರಿಪ್ ಕಡಿತಗೊಳಿಸುವುದು, ಬಸ್ಸಿನ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ಹಾಕುವುದು ಮಾಡುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾದರೂ ಬಸ್ ನಿಲ್ಲದೇ ಹೋಗುವುದು, ಮಕ್ಕಳ ಶಾಲಾ ಕಾಲೇಜಿನ ಬ್ಯಾಗುಗಳನ್ನು ಕಂಡರೆ ಮಕ್ಕಳಿಗೆ ಬಯ್ಯುವ ಘಟನೆಗಳು ನಡೆಯುತ್ತಿದೆ. ವಿದ್ಯಾರ್ಥಿಗಳು, ಯುವಸಮುದಾಯ ಹಲವು ಬಾರಿ ಮನವಿ, ಹೋರಾಟಗಳನ್ನು ನಡೆಸಿ ಜಿಲ್ಲಾಧಿಕಾರಿಗೆ ಸಾರ್ವಜನಿಕರ ಸಹಿಯುಳ್ಳ ಮನವಿ ಪತ್ರವನ್ನು ಸಲ್ಲಿಸಿದರೂ ಈವರೆಗೆ ಸ್ಪಂದನೆ ದೊರೆತಿಲ್ಲ. ಖಾಸಗಿ ಬಸ್ ಮಾಲಕರ ಲಾಬಿಯಿಂದ  ಸರಕಾರಿ ಬಸ್ ಬಾರದಂತೆ ತಡೆಯಲಾಗುತ್ತಿದೆ” ಎಂದು ದೂರಿದರು.

 

 

LEAVE A REPLY