ಪಲ್ಗುಣಿ ಮಾಲಿನ್ಯ ವಿರೋಧಿಸಿ ಇಂದು ಡಿವೈಎಫೈ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ವಿರೋಧಿ, ಜೀವ ವಿರೋಧಿ ನಿಲುವುಗಳನ್ನು ವಿರೋಧಿಸಿ `ಪಲ್ಗುಣಿ ಉಳಿಸಿ’ ಎಂಬ ಬೇಡಿಕೆಯನ್ನು ಮುಂದಿಟ್ಟು ಡಿವೈಎಫೈ ವತಿಯಿಂದ ಅಭಿಯಾನವೊಂದನ್ನು ಆರಂಭಿಸಲಾಗುತ್ತಿದ್ದು, ಮೇ 19ರ ಬೆಳಿಗ್ಗೆ 10.30 ಗಂಟೆಗೆ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಈಡಿರುವ ಅವರು, “ಜಿಲ್ಲೆಯ ಜೀವನದಿಗಳಲ್ಲೊಂದಾದ ಫಲ್ಗುಣಿ ನದಿಗೆ ಎಂಆರ್ಪಿಎಲ್, ಎಸ್ಸಿಝೆಡ್, ಅದಾನಿ ಕಂಪೆನಿಗಳು ಸೇರಿದಂತೆ ಬೈಕಂಪಾಡಿಯ ಬಹುತೇಕ ಕೈಗಾರಿಕೆಗಳು ಮಾಲಿನ್ಯಕಾರಕ ಕೊಳಚೆ ನೀರನ್ನು ಹರಿಸುತ್ತಿವೆ. ಇದರಿಂದ ಪಲ್ಗುಣಿ ನದಿ ಪೂರ್ಣ ಮಲಿನಗೊಂಡಿದ್ದು ಮೀನು ಸಂತತಿ ನಾಶವಾಗುತ್ತಾ ಅಂತರ್ಜಲ ಮಲಿನಗೊಳ್ಳುತ್ತಿದೆ. ನೀರಿನ ಬಾವಿಗಳು, ಸ್ಥಳೀಯ ಕೃಷಿಭೂಮಿಗಳು ನಿರುಪಯುಕ್ತಗೊಂಡಿವೆ. ಜನತೆಯ ಆರೋಗ್ಯದ ಸಮಸ್ಯೆಗಳು ಉಲ್ಬಣಿಸುತ್ತಿದೆ. ಬಹುಕಾಲದಿಂದ ಸ್ಥಳೀಯ ಜನತೆ ಈ ಕುರಿತು ದೂರುಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುತ್ತಿದ್ದರೂ ಜಿಲ್ಲಾಡಳಿತ ಕಂಪೆನಿಗಳ ಜೊತೆ ಶಾಮೀಲಾಗಿ ಮಾಲಿನ್ಯದ ವಿರುದ್ಧ ಮೌನ ತಾಳಿದೆ. ಈಗ ಪರಿಸ್ಥಿತಿ ಗಂಭೀರ ಸ್ವರೂಪ ತಾಳಿದೆ” ಎಂದು ತಿಳಿಸಿದ್ದಾರೆ.