ಜಿಲ್ಲೆಯಲ್ಲೂ ಇಂದಿರಾ ಕ್ಯಾಂಟೀನ್ ತೆರೆಯಲು ಡಿವೈಎಫೈ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಸರಕಾರ `ಇಂದಿರಾ ಕ್ಯಾಂಟೀನ್’ ಆರಂಭಿಸಲು ಮುಂದಾಗಿರುವುದು ಒಳ್ಳೆಯ ಸಂಗತಿ. ಆದರೆ ಅದನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 15ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ `ಅಣಕು ಇಂದಿರಾ ಕ್ಯಾಂಟೀನ್’ ತೆರೆಯಲಿದ್ದೇವೆ ಎಂದು ಡಿವೈಎಫೈ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಅಂದು ಬೆಳಿಗ್ಗೆ 11 ಗಂಟೆಗೆ ಈ ಪ್ರತಿಭಟನೆಯನ್ನು ನಡೆಸಲಿದ್ದೇವೆ. ಇಂದಿರಾ ಕ್ಯಾಂಟೀನುಗಳನ್ನು ಕೇರಳ ಮಾವೇಲಿ ಮಾದರಿಯಲ್ಲಿ ಕಡಿಮೆ ದರದಲ್ಲಿ ಆರಂಭಿಸಬೇಕು. ಅಲ್ಲದೆ ಖಾಸಗಿ ಉಪಹಾರ ಗೃಹಗಳ ಬೆಲೆ ನಿಯಂತ್ರಿಸುವ ಬಗ್ಗೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

“ಬಡ ಮತ್ತು ಮಧ್ಯಮ ವರ್ಗದ ಮಂದಿ ಹೋಟೆಲಿಗೆ ಹೋಗಿ ತಿಂಡಿ ತಿನ್ನಲಾಗದ ಸ್ಥಿತಿ ಬಂದಿದೆ. ತಿಂಡಿ, ಊಟದ ದರ ಗಗನಕ್ಕೇರಿದೆ. ಕಳೆದ ಹಲವು ವರ್ಷಗಳಿಂದ ಉಪಹಾರಗಳಲ್ಲಿ ಏರಿಕೆಯಾಗಿರುವ ದುಪ್ಪಟ್ಟು ಬೆಲೆಗಳನ್ನು ಇಳಿಸಿ ಎಂದು ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಮಂಗಳೂ ಬೆಲೆಯುತ್ತಿರುವ ದುಬಾರಿ ನಗರವಾಗುತ್ತಿದ್ದು, ಜನಸಾಮಾನ್ಯರಿಗೂ ಸೊತ್ತುಗಳು ಕೈಗಟುಕದ ಸ್ಥಿತಿ ತಲುಪಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಎಲ್ಲಾ ಬಡವರ್ಗದವರಿಗೆ ಉತ್ತಮ ದರದಲ್ಲಿ ಕ್ಯಾಂಟೀನಿನಲ್ಲಿ ತಿಂಡಿತಿನಸುಗಳು ಲಭ್ಯವಾಗಲಿ” ಎಂದು ಅವರು ಆಗ್ರಹಿಸಿದರು.