ಎಂಆರ್ಪಿಎಲ್ ನಾಲ್ಕನೇ ಹಂತದ ಭೂಸ್ವಾಧೀನಕ್ಕೆ ಡಿಫಿ ವಿರೋಧ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಎಂಆರ್ಪಿಎಲ್ ನಾಲ್ಕನೇ ಹಂತದ ವಿಸ್ತರಣೆಗೆ ಕರ್ನಾಟಕ ಸರಕಾರ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಿರುವುದನ್ನು ಡಿವೈಎಫೈ (ಡಿಫಿ) ದ ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಎಂಆರ್ಪಿಎಲ್ ಮೂರು ಹಂತದ ಕೈಗಾರಿಕಾ ಘಟಕಗಳಿಂದ ಸ್ಥಳೀಯ ಜನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಂಗಳೂರು ನಗರದ ಆಸುಪಾಸಿನಲ್ಲಿ ಈಗಾಗಲೇ ಹತ್ತಕ್ಕೂ ಹೆಚ್ಚು ಅತಿ ಅಪಾಯಕಾರಿ ಕೈಗಾರಿಕಾ ಘಟಕಗಳಿವೆ. ಜನದಟ್ಟಣೆಗೆ ಹತ್ತಿರವಾಗಿ ಮತ್ತಷ್ಟು ಬೃಹತ್ ಕೆಮಿಕಲ್ ಕೈಗಾರಿಕೆಗಳನ್ನು ಸ್ಥಾಪಿಸುವುದು ಮಂಗಳೂರು ನಗರದ ಮಟ್ಟಿಗೆ ಅಪಾಯಕಾರಿ. ಈಗಾಗಲೆ ಮಂಗಳೂರು ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಎಂಆರ್ಪಿಎಲ್ ನಾಲ್ಕನೇ ಹಂತದಿಂದಾಗಿ ಇಲ್ಲಿನ ಜನ ನೀರಿನ ಹಾಹಾಕಾರವನ್ನು ಎದುರಿಸಲಿದ್ದಾರೆ. ಇಷ್ಟಲ್ಲದೆ ಎಂಆರ್ಪಿಎಲ್ ಪರಿಸರ ನಿಯಮಗಳನ್ನು ಪಾಲಿಸದಿರುವ ಕಪ್ಪು ಚರಿತ್ರೆಯನ್ನು ಹೊಂದಿದೆ. ಎಂಆರ್ಪಿಎಲ್ ಈಗಿರುವ ಘಟಕಗಳ ಮಾಲಿನ್ಯದಿಂದಾಗಿ ಸುರತ್ಕಲ್, ಬಜಪೆ ಆಸುಪಾಸಿನ ಗ್ರಾಮಗಳು ಹಲವು ರೀತಿಯ ಮಾಲಿನ್ಯಗಳಿಂದ ತೀವ್ರ ಸಂಕಷ್ಟಗಳಿಗೆ ಗುರಿಯಾಗಿದೆ. ಅದರಲ್ಲೂ ಮೂರನೇ ಹಂತದ ಕೋಕ್ ಸಲ್ಫರ್ ಘಟಕಗಳಿಂದಾಗಿ ಜೋಕಟ್ಟೆ ಭಾಗದಲ್ಲಿ ಮಾಲಿನ್ಯದಿಂದ ಉಂಟಾದ ಗಂಭೀರ ಸಮಸ್ಯೆಗಳು, ನಿಯಮ ಉಲ್ಲಂಘನೆಗಳು ಎಂಆರ್ಪಿಎಲ್ ಉಂಟುಮಾಡಿರುವ ಅನಾಹುತಗಳಿಗೆ ತಾಜಾ ಉದಾಹರಣೆ. ಈ ಎಲ್ಲಾ ಆಧಾರಗಳನ್ನು ಪರಿಗಣಿಸಿ ನೋಡಿದರೆ ಮತ್ತೆ ಎಂಆರ್ಪಿಎಲ್ ವಿಸ್ತರಣೆಗೆ ಸಾವಿರಾರು ಎಕರೆ ಭೂಮಿಯನ್ನು ಮಂಗಳೂರು ತಾಲೂಕಿನಲ್ಲಿ ನೀಡುವುದು ಮುಂದೆ ಮತ್ತಷ್ಟು ಅನಾಹುತಗಳಿಗೆ ಕಾರಣವಾಗಲಿದೆ.
ಈ ಅನುಭವಗಳ ಹಿನ್ನಲೆಯಲ್ಲಿ ಎಂಆರ್ಪಿಎಲ್ ವಿಸ್ತರಣೆಗೆ ಸರಕಾರ ಭೂಸ್ವಾಧೀನದ ಅಧಿಸೂಚನೆಯನ್ನು ಏಕಪಕ್ಷೀಯವಾಗಿ ಹೊರಡಿಸಿರುವುದನ್ನು ಡಿಫಿ ದ ಕ ಜಿಲ್ಲಾಸಮಿತಿ ತೀವ್ರವಾಗಿ ವಿರೋಧಿಸುತ್ತದೆ. ರಾಜ್ಯ ಸರಕಾರ ಅಧಿಸೂಚನೆಯನ್ನು ವಾಪಾಸ್ ಪಡೆಯಬೇಕೆಂದು ಒತ್ತಾಯಿಸುತ್ತದೆ ಎಂದು ಡಿಫಿ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.