ಕಾಸರಗೋಡಿನಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

ಡಿಫಿ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ರಾಜಕೀಯ ಪಕ್ಷಗಳ ಆಟಾಟೋಪಕ್ಕೆ ನಲುಗಿ ಹೋಗಿದ್ದ ಕಾಸರಗೋಡಿನ ಗಲಭೆ ತಣ್ಣಗಾಗುವ ಮೊದಲೇ ಇದೀಗ ಮತ್ತೆ ಕಾಸರಗೋಡಿನಲ್ಲಿ ರಾಜಕೀಯ ದಳ್ಳುರಿ ಹಬ್ಬತೊಡಗಿದೆ. ಡಿ ವೈ ಎಫ್ ಐ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ ಸಂಜೆ ಬೋವಿಕ್ಕಾನದಲ್ಲಿ ಘರ್ಷಣೆ ನಡೆದಿದ್ದು, ಕಾರೊಂದಕ್ಕೆ ಬೆಂಕಿ ಹಚ್ಚಲಾಗಿ ಅದು ಸಂಪೂರ್ಣ ಸುಟ್ಟು ಹೋಗಿದೆ.
ರಸ್ತೆ ಪಕ್ಕದಲ್ಲೇ ಪಾರ್ಕಿಂಗ್ ಮಾಡಲಾಗಿದ್ದ ರಿಕ್ಷಾಗಳಿಗೂ ಬೆಂಕಿ ಹಚ್ಚಲಾಗಿದೆ. ದುಷ್ಕರ್ಮಿಗಳ ತಂಡವೊಂದು ಅಂಗಡಿಯೊಳಗೆ ನುಗ್ಗಿ ಬೆಂಕಿ ಹಚ್ಚಿದ್ದು, ಅಂಗಡಿಯೊಳಗಿನ ಸೊತ್ತುಗಳೆಲ್ಲವೂ ಬೆಂಕಿಗೆ ಆಹುತಿಯಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತರಿಗೆ ನಷ್ಟ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ ಡಿ ವೈ ಎಫ್ ಐ ಕಾರ್ಯಕರ್ತರು ಸಂಜೆ ಬೋವಿಕ್ಕಾನ ಪೇಟೆಯಲ್ಲಿ ಮೆರವಣಿಗೆ ನಡೆಸಿತ್ತು. ಡಿ ವೈ ಎಫ್ ಐ ಕಾರ್ಯಕರ್ತರ ಮೆರವಣಿಗೆ ಮೇಲೆ ಕಿಡಿಗೇಡಿಗಳು ಮೊದಲಿಗೆ ಕಲ್ಲೆಸೆದಿದ್ದರು ಎಂದು ಹೇಳಲಾಗುತ್ತಿದೆ.
ಗಲಭೆಯ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.