ರೈ ಬೆಂಬಲಿಸಿದ ಡಿಫಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಲ್ಲಡ್ಕದ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಎಸ್ಪಿಯವರಿಗೆ ನಿರ್ದೇಶನ ನೀಡಿದ ಸಚಿವ ರೈ ಅವರ ಹೇಳಿಕೆಯನ್ನು ತಾನು ಬೆಂಬಲಿಸುವುದಾಗಿ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಕಲ್ಲಡ್ಕದಲ್ಲಿ ನಡೆದ ಗಲಭೆಗಳು ಎರಡು ಧಾರ್ಮಿಕ ಸಮುದಾಯಗಳನ್ನು ಮೂಲಭೂತವಾದಿ ಗುಂಪುಗಳು ಗುರಿಯಾಗಿರಿಸಿಕೊಂಡಿವೆ ಎಂದು ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿ ನಾಯಕರು ಸದನದಲ್ಲಿ ಸಚಿವ ರೈ ಅವರನ್ನು ತರಾಟೆಗೆತ್ತಿಕೊಂಡ ಘಟನೆಯನ್ನು ಟೀಕಿಸಿದ ಮುನೀರ್ ಕಾಟಿಪಳ್ಳ, ಇದೇ ಬಿಜೆಪಿಯವರು ಕಲ್ಲಡ್ಕ ಪ್ರಭಾಕರ್ ಭಟ್ ಪ್ರಚೋದನಕಾರಿ ಭಾಷಣ ಮಾಡಿದಾಗ ತಮ್ಮ ಆಕ್ರೋಶವನ್ನು ಏಕೆ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದರು. ನವೆಂಬರ್ 2015ರಲ್ಲಿ ತಮ್ಮದೇ ಸಮುದಾಯದ ಹರೀಶ್ ಪೂಜಾರಿ ಹತ್ಯೆಯಾದಾಗ ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಸಂಸದ ನಳಿನ್‍ಕುಮಾರ್ ಕಟೀಲು ಅವರು ಅವರು ಕೂಡಾ ಬೆಂಕಿ ಹಚ್ಚುವ ಹೇಳಿಕೆ ಕೊಟ್ಟಾಗ ಇವರು ಎಲ್ಲಿಗೆ ಹೋಗಿದ್ದರು ಎಂದರು. ಅಭಿವೃದ್ಧಿ ವಿಚಾರಗಳ ಬಗ್ಗೆ ಸದನದಲ್ಲಿ ಬಿಜೆಪಿ ನಾಯಕರು ಚರ್ಚೆ ಮಾಡಲಿ ಎಂದು ಮುನೀರ್ ಹೇಳಿದ್ದಾರೆ.