ಆಚಾರವಿಲ್ಲದ ಡೀವಿ ನಾಲಗೆ…

ವಿಶ್ಲೇಷಣೆ

 ಅರವತ್ತಕ್ಕೇ ಅರಳು ಮರಳು ಅಂತಾರಲ್ಲಾ… ಹಾಗಾಗಿದೆ ಪ್ರಸ್ತುತ ಬಿಜೆಪಿ ನಾಯಕರ ಸ್ಥಿತಿ. ಅದ್ಯಾವ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ರಾಜ್ಯದಲ್ಲಿ ಪರಿವರ್ತನಾ ರ್ಯಾಲಿ ಹಮ್ಮಿಕೊಂಡರೋ ದೇವರೇ ಬಲ್ಲ. ಪರಿವರ್ತನಾ ರ್ಯಾಲಿ ಮೂಲಕ ತಮ್ಮ ಮನಸ್ಸಿನಲ್ಲಾದ ಪರಿವರ್ತನೆಯನ್ನು ಜನರಿಗೆ ಅವರು ಬಿನ್ನವಿಸಬೇಕಿತ್ತು. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ನಾಯಕರು ಮಾಡಿದ್ದು ವಾಚಾಮಗೋಚರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತೆಗಳಿದ್ದು !

ಬಿಜೆಪಿ ಪಕ್ಷದ ಹಿರಿಯ ಕೆಲ ನಾಯಕರಿಗೆ ವೇದಿಕೆ ಮೇಲೇರಿ ವಾಗ್ದಾಳಿ ನಡೆಸುವ ಭರದಲ್ಲಿ ಯಾರಿಗೆ ಬೈಯುತ್ತಿದ್ದೇವೆ ಎನ್ನುವ ಪರಿವೆಯೂ ಇವರಿಗಿಲ್ಲ. ಕಾಂಗ್ರೆಸ್ಸನ್ನು ತೆಗಳುವ ಭರದಲ್ಲಿ ತಮ್ಮದೇ ಪಕ್ಷದ ಪ್ರಧಾನಿಯನ್ನು ತೆಗಳಿದರು ಡೀವಿ ಸದಾನಂದ ಗೌಡ ಎನ್ನುವ ಮೊದ್ಮಣಿ ! ಇವರ ಮಾತಿನ ವಾಗ್ಘರಿಯಿಂದ ಮುಜುಗರಕ್ಕೀಡಾದವರು ಪಕ್ಷದ ಕಾರ್ಯಕರ್ತರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ, ಕೇಂದ್ರ ಮಂತ್ರಿ ಡಿ ವಿ ಸದಾನಂದ ಗೌಡ, ಶ್ರೀರಾಮುಲು, ಶೋಭಾ ಕರಂದ್ಲಾಜೆ  ಅವರಿಗೆ ತಾವೇನು ಹೇಳುತ್ತಿದ್ದೇವೆ ಅನ್ನುವ ಪರಿವೆಯೇ ಇಲ್ಲ.

ಶುಕ್ರವಾರದಂದು ಸುಳ್ಯದಲ್ಲಿ ನಡೆದಿದ್ದ ಪರಿವರ್ತನಾ ರ್ಯಾಲಿಯಲ್ಲಿ “ಹಿಂದೂಗಳನ್ನು ಕೊಂದಿರುವುದು ಬೇರೆ ಯಾರೂ ಅಲ್ಲ, ಬಿ ಎಸ್ ಯಡ್ಯೂರಪ್ಪ ಮತ್ತು ಶೋಭಾ ಕರಂದ್ಲಾಜೆ” ಎಂದು ಶ್ರೀರಾಮುಲು ತನ್ನ ಭಾಷಣದಲ್ಲಿ ಬೊಬ್ಬಿರಿದರೆ, ಬಂಟ್ವಾಳದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಬೈದರು.

ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರವು ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದೆ. “ನರೇಂದ್ರ ಮೋದಿ ಅವರಿಗೆ ನಾಚಿಕೆ ಆಗಬೇಕು” ಎಂದು ದೂರಿದ್ದರು. ಇದೇ ಸದಾನಂದ ಗೌಡ ಒಂದೇ ದಿನದ ಹಿಂದೆ ತಮ್ಮ ಹುಟ್ಟೂರು ಸುಳ್ಯದಲ್ಲಿ ರ್ಯಾಲಿಯ ವೇೀದಿಕೆಯಿಂದ ಮೋದಿಯನ್ನು ಇದೇ ರಾಗದಲ್ಲಿ ನಿಂದಿಸಿದ್ದರು.

ಇಂದು ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆದಿದೆ. ಪ್ರತಿಯೊಂದು ಮಾತುಗಳೂ ಫೇಸ್ಬುಕ್, ವಾಟ್ಸಪ್, ಟ್ವಿಟ್ಟರಿನಲ್ಲಿ ಹರಿದಾಡುತ್ತಿದೆ. ತಪ್ಪಿ ಮಾತನಾಡಿದರೂ ತಮಗೆ ಕಂಟಕ ಎಂದು ಅರಿತಿರಬೇಕಾದ ಒಬ್ಬ ಜವಾಬ್ದಾರಿಯುತ ಮಂತ್ರಿ, ತಮ್ಮದೇ ಪ್ರಧಾನಿ ನರೇಂದ್ರ ಮೋದಿಯವರನ್ನೇ ಟೀಕಿಸುತ್ತಿರುವುದು ಇವರ ಮಾತಿಗೆ ಲಗಾಮು ಇಲ್ಲ ಎನ್ನುವುದನ್ನು ಸೂಚಿಸುತ್ತದೆ.

ಇವರಾಡಿದ ಮಾತುಗಳು ಅಲ್ಲಿ ಪ್ರಧಾನಿಯವರನ್ನೂ ಮುಟ್ಟುತ್ತದೆ. ಸಾಮಾಜಿಕ ಜಾಲ ತಾಣವನ್ನು ಪರಿಣಾಮಕಾರಿಯಾಗಿ ಉಪಯೋಗಿಸುತ್ತಿರುವ ಪ್ರಧಾನಿಯವರಿಗೆ ಈ ವಿಚಾರ ಖಂಡಿತಾ ತಿಳಿಯುತ್ತದೆ. ಇವರಾಡಿದ ಮಾತುಗಳಿಂದ ಅವರೂ ಮುಜುಗರ ಅನುಭವಿಸುತ್ತಾರೆ.

ರಾಜಕಾರಣಿಗಳಿಗೆ, ವೈದ್ಯರಿಗೆ ಅರಳುಮರಳು ಶುರುವಾಯಿತೆಂದರೆ ಸಮಾಜಕ್ಕೆ ಅದು ಅಪಾಯಕಾರಿ. ಈ ಸಂಗತಿ  ಸದಾನಂದ ಗೌಡರಿಗೂ ಗೊತ್ತಿರಬೇಕಿತ್ತು. ಸದಾನಂದ ಗೌಡರ ಇಂತಹ ಮಾತುಗಳು ಪಕ್ಷಕ್ಕೆ ಗಂಡಾಂತರಕಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ತಿಪ್ಪೇಸಾರಿಸುವ ಕೆಲಸ ಮಾಡುತ್ತಿರುವ ಸದಾನಂದ ಗೌಡ ತನ್ನ ನಗುವಿನಿಂದಲೇ ಎಲ್ಲರನ್ನೂ ಸುಮ್ಮನಾಗಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸ ಏನೂ ಇಲ್ಲ. ಸುಳ್ಳಿನ ಕಂತೆ ಕಟ್ಟುವುದರಲ್ಲಿ ನಿಸ್ಸೀಮನಾಗಿರುವ ಇವರು ನೇರ ರಾಜೀನಾಮೆ ಕೊಟ್ಟು ಊರಿಗೆ ಬಂದು ಕುಳಿತುಕೊಳ್ಳುವುದು ಒಳ್ಳೆಯದು.

ಇನ್ನು ರ್ಯಾಲಿಯುದ್ದಕ್ಕೂ ಇವರು ಮುಂದಿನ ಬಾರಿ ಗೆಲುವು ತಮ್ಮದೇ, ತಮ್ಮ ಪಕ್ಷಕ್ಕೆ 150 ಸೀಟಿನ ಗೆಲುವು ಗ್ಯಾರಂಟಿ ಎಂದು ಘಂಟಾಘೋಷವಾಗಿ ಹೇಳಿಕೊಂಡು ತಿರುಗಾಡ್ತಿರೋದು ನೋಡಿದರೆ ಇವರಿಗೆ ವಾಸ್ತವಿಕತೆಯ ಅರಿವು ಇಲ್ಲ ಎನ್ನಬೇಕು. ಒಮ್ಮೆ ರಾಜ್ಯದ ಅಧಿಕಾರ ಸಿಕ್ಕಿ ಬಿಟ್ಟರೆ ಸಾಕು ಎಂಬಂತಾಗಿದೆ. ತಾವು ಇಷ್ಟು ಸೀಟು ಗೆಲ್ಲುತ್ತೇವೆ ಎಂದು ನಿಖರವಾಗಿ ಹೇಳುವ ಇವರಿಗೆ, ಹಿಂದೊಮ್ಮೆ ರಾಜ್ಯದ ಜನತೆ ಕೊಟ್ಟ ಅಧಿಕಾರವನ್ನೇ ಉಳಿಸಿಕೊಳ್ಳಲಾಗಲಿಲ್ಲ, ಇನ್ನು ಮತ್ತೆ ಅಧಿಕಾರ ಸಿಕ್ಕೇ ಬಿಡ್ತು ಅನ್ನುವ ಹಾಗೆ ಮಾತನಾಡೋದು ನೋಡಿದ್ರೆ ಮತದಾರರು ಇವರ ಅಡಿಯಾಳುಗಳೇ ಎಂದು ಕೇಳುವಂತಾಗಿದೆ.