ದುರ್ಯೋಧನನ ಕಾಸ್ಟ್ಯೂಮ್ಸ್ 40 ಕೇಜಿ ಭಾರ !

ದರ್ಶನ್ ಈಗ `ಕುರುಕ್ಷೇತ್ರ’ ಚಿತ್ರದಲ್ಲಿ ದುರ್ಯೋಧನನಾಗಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಸಿನಿಮಾದ ಶೂಟಿಂಗ್ ಈಗ ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗುತ್ತಿದೆ. ದರ್ಶನ್ ಆದಿಯಾಗಿ ಎಲ್ಲರೂ ಈಗ ರಾಜಮಹಾರಾಜರ ಗೆಟಪ್ಪಿನಲ್ಲಿ ಕಂಗೊಳಿಸುತ್ತಿದ್ದಾರೆ. ಮಣಗಟ್ಟಲೆ ಭಾರದ ಕಾಸ್ಟ್ಯೂಮ್ಸ್ ಧರಿಸಿ ತಿರುಗಾಡುವ ಅನುಭವವನ್ನು ದರ್ಶನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ.

ದರ್ಶನ್ ಸಂದರ್ಶನವೊಂದರಲ್ಲಿ ಮಾತಾಡುತ್ತಾ “ನಾನು ಧರಿಸಿರುವ ಆಭರಣ, ಕಾಸ್ಟ್ಯೂಮ್ಸ್ ಭಾರ ಹೆಚ್ಚೂ ಕಡಿಮೆ 35ರಿಂದ 40 ಕೇಜಿ ಇದೆ. ಡಿಸೈನ್ಸ್ ಕಚ್ಚೆಯ ತೂಕವೇ ಮೂರ್ನಾಲ್ಕು ಕೆಜಿ ಇರಬಹುದು. ಇನ್ನು ಭಾರವಾದ ಆಭರಣ, ಐದಾರು ಇಂಚಿನ ಗೋಲ್ಡ್ ಕಲರ್ ಚಪ್ಪಲಿ, ಕಿರೀಟ, ಗದೆ ಎಲ್ಲವೂ ಸೇರಿ 40 ಕೆಜಿ ಇರಬಹುದು. ಪ್ರತೀದಿನ ಈ ಗೆಟಪ್ ಪಡೆಯಲು 2 ತಾಸು ಮೇಕಪ್ ಮಾಡಿಕೊಳ್ಳಬೇಕು. ಬೆಳಿಗ್ಗೆ 11ಗಂಟೆಯಿಂದ ಸಂಜೆ ಆರು ಗಂಟೆಯವರೆಗೂ ಇದೇ ಡ್ರೆಸ್ಸಿನಲ್ಲಿ ಕೂತಿರಬೇಕು. ಶೂಟಿಂಗ್ ಇಲ್ಲದಾಗ ಹೆಚ್ಚೆಂದರೆ ಗದೆ, ಕಿರೀಟ ಬದಿಗಿಡಬಹುದು ಅಷ್ಟೇ” ಎನ್ನುತ್ತಾನೆ ದರ್ಶನ್.  ಈಗಾಗಲೇ ದರ್ಶನ್ ನಟನೆಯಲ್ಲಿ ಕಲರ್ಫುಲ್ ಹಾಡಿನ ಜೊತೆಗೇ ಕೆಲವಾರು ದೃಶ್ಯಗಳ ಚಿತ್ರೀಕರಣ ನಡೆದಿದೆ. 2ಡಿ ಹಾಗೂ 3ಡಿಯಲ್ಲಿ ಪ್ರತೀ ದೃಶ್ಯವನ್ನು ಎರಡೆರಡು ಬಾರಿ ಸೆರೆಹಿಡಿಯಲಾಗುತ್ತಿದೆಯಂತೆ.  ಸಿನಿಮಾದಲ್ಲಿ ರವಿಚಂದ್ರನ್, ಅರ್ಜುನ್ ಸರ್ಜಾ, ನಿಕಿಲ್ ಕುಮಾರ್, ಶ್ರೀನಾಥ್, ಅಂಬರೀಷ್, ಡ್ಯಾನಿಷ್, ಸೋನು ಸೂದ್ ಸೇರಿದಂತೆ ಬಹುದೊಡ್ಡ ತಾರಾಗಡಣವೇ ಇದೆ. ಎಲ್ಲರೂ ಈಗ ಗಡ್ಡ ಮೀಸೆ ಬೋಳಿಸಿಕೊಂಡು ಸಮಯ ಸಿಕ್ಕಾಗೆಲ್ಲ ಜಿಮ್ಮಿನಲ್ಲಿ ವರ್ಕೌಟ್ ಮಾಡುತ್ತಾ ದೇಹ ಹುರಿಗೊಳಿಸಿಕೊಳ್ಳವುದರಲ್ಲಿಯೇ ತಲ್ಲೀನರಾಗಿದ್ದಾರೆ.