ಕುಡುಕ ಚಾಲಕನ ಓಮ್ನಿ ಗುದ್ದಿ ಬಾಲಕಿ ಮೃತ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ತನ್ನ ತಾಯಿ ಜೊತೆಗೆ ರಸ್ತೆ ದಾಟುತ್ತಿದ್ದ ಐದರ ಹರೆಯದ ಬಾಲೆಗೆ ಓಮ್ನಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿದ ಘಟನೆ ಕೊಕ್ಕಡದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಕೃತ್ತಿಕಾ ಎಂದು ಗುರುತಿಸಲಾಗಿದೆ. ಈಕೆ ಪಟ್ಲಡ್ಕ ನಿವಾಸಿ ಶಿವಪ್ಪ ಎಂಬವರ ಪುತ್ರಿ. ಒಂದನೇ ತರಗತಿ ವಿದ್ಯಾರ್ಥಿನಿ.

ಅನಾರೋಗ್ಯ ನಿಮಿತ್ತ ತನ್ನ ತಾಯಿ ಜೊತೆಗೆ ಕೊಕ್ಕಡಕ್ಕೆ ವೈದ್ಯರ ಬಳಿಗೆ ತೆರಳಿದ್ದ ಕೃತ್ತಿಕಾ ಸಂಜೆ 7 ಗಂಟೆ ಸುಮಾರಿಗೆ ಮನೆಗೆ ಮರಳಲು ತಾಯಿ ಜೊತೆಗೆ ಬರುತ್ತಿದ್ದಾಗ ಅತೀ ವೇಗದಿಂದ ಬಂದ ಓಮ್ನಿ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆಕೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದಳು.

ಓಮ್ನಿ ಚಾಲಕನ ಬೇಜವಾಬ್ದಾರಿ ಚಾಲನೆಯಿಂದಾಗಿಯೇ ಬಾಲಕಿಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತ ಪಾನಮತ್ತನಾಗಿಯೂ ಇದ್ದ ಸ್ಥಳೀಯರು ದೂರಿದ್ದು, ಚಾಲಕನನ್ನು ನಾರಾಯಣ ಶಬರಾಡಿ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಠಾಣಾ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಕ್ಕಡದ ಎಂಡೋಪಾಲನಾ ಕೇಂದ್ರದ ಓಮ್ನಿ ಇದಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ(ಎಸ್ ಕೆ ಡಿ ಆರ್ ಡಿ ಪಿ)ಗೆ ಸೇರಿದ್ದು, ಚಾಲಕ ಕರ್ತವ್ಯದ ಅವಧಿಯಲ್ಲಿ ಪಾನಮತ್ತನಾಗಿ ವಾಹನ ಚಲಾಯಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೇ, ನಾರಾಯಣ ತನ್ನ ಸ್ನೇಹಿತರ ಜೊತೆಗೆ ಸೇರಿ ಓಮ್ನಿಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ದೂರು ನೀಡಲು ಸ್ಥಳೀಯರು ನಿರ್ಧರಿಸಿದ್ದಾರೆ.