ಕುಡಿದ ಮತ್ತಿನಲ್ಲಿ ಪತ್ನಿ ಕೊಲೆಗೈದ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ : ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಶುಕ್ರವಾರ ಕುಡಿದ ಮತ್ತಿನಲ್ಲಿ ಗಂಡ ಹೆಂಡತಿಯ ಚೂಡಿದಾರದ ವೇಲಿನಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆಗೈದಿದ್ದಾನೆ.

ನಿರ್ಮಲಾ ಶಂಕರ್ ಉಣಕಲ್ ಕೊಲೆಯಾದ ಮಹಿಳೆ. ಆಕೆಯ ಪತಿ ಶಂಕರ್ ಉಣಕಲ್ ಕುಡಿದು ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಆಕೆಯ ವೇಲ್.ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಕೂಲ್ಡ್ರಿಂಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹೆಂಡತಿಯ ಮೇಲೆ ಆರೋಪಿ ಸಂಶಯ ಪಟ್ಟಿರುವುದೇ ಕೊಲೆಗೆ ಕಾರಣ ಎನ್ನಲಾಗಿದೆ. ಘಟನೆ ನಡೆದು 3 ಗಂಟೆಯೊಳಗೆ ಯಲ್ಲಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂಲತಃ ಗದಗ ಜಿಲ್ಲೆಯ ನರಗುಂದ ನಿವಾಸಿಗಳಾದ ಶಂಕರ್ ಉಣಕಲ್ ಮತ್ತು ಆಕೆಯ ಆತನ ಪತ್ನಿ ನಿರ್ಮಲಾ ಒಂದು ವರ್ಷದಿಂದ ಕೆಲಸಕ್ಕಾಗಿ ಗುಳ್ಳಾಪುರದಲ್ಲಿ ವಾಸ್ತವ್ಯ ಹೊಂದಿದ್ದರು. 8 ತಿಂಗಳ ಕಾಲ ವೆಂಕಟೇಶ್ ಪೈ ಎನ್ನುವವರು ಮನೆಯಲ್ಲಿ ಬಾಡಿಗೆಗೆ ಇದ್ದ ಈ ದಂಪತಿ ಪ್ರತಿದಿನ ನಡೆಯುವ ಜಗಳದ ಕಾರಣಕ್ಕೆ ವೆಂಕಟೇಶ್ ಪೈ ಮನೆ ಖಾಲಿ ಮಾಡಿಸಿದ್ದರು. ನಂತರ ಜನತಾ ಕಾಲನಿಯಲ್ಲಿ ಕಳೆದೆರಡು ತಿಂಗಳಿಂದ ಬಾಡಿಗೆಗಿದ್ದರು. ಕುಡಿದು ಬಂದು ಶಂಕರ್ ಉಣಕಲ್ ಆತನ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದು, ಆಕೆಯ ವೇಲ್.ನಿಂದ ಆಕೆಯ ಕುತ್ತಿಗೆ ಬಿಗಿದು ಬೇರೊಬ್ಬರ ಮನೆಗೆ ತೆರಳಿದ್ದಾನೆ. ಆಕೆ ಸತ್ತಿರುವ ಬಗ್ಗೆ ಆತನಿಗೆ ತಿಳಿದಿರಲಿಲ್ಲ.

ಆಕೆ ಹೀಗೇಕೆ ಮಲಗಿದ್ದಾಳೆ ಎಂದು ಅಕ್ಕಪಕ್ಕದವರು ಶಂಕರನನ್ನು ವಿಚಾರಿಸಿದಾಗ ಆಕೆ ನಿದ್ದೆ ಗುಳಿಗೆ ತಿಂದು ಮಲಗಿದ್ದಾಳೆ ಎಂದು ಸಬೂಬು ಹೇಳಿದ್ದಾನೆ. ನಂತರ ಸಂಶಯಗೊಂಡ ಸ್ಥಳೀಯರು ಆತನನ್ನು ಬೇರೊಂದು ಮನೆಯಲ್ಲಿ ಕುಳ್ಳರಿಸಿ ಯಲ್ಲಾಪುರ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಶಂಕರ್ ಉಣಕಲ್.ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದಾಗ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಯಲ್ಲಾಪುರ ಪೊಲೀಸ್ ನಿರೀಕ್ಷಕ ಮಂಜುನಾಥ ನಾಯಕ ಸ್ಥಳಕ್ಕೆ ಭೇಟಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಪಿ ಎಸ್ ಐ ಶ್ರೀಧರ್ ಎಸ್ ಆರ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.