ನಗರದಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ಜಾಲ

ಪಿಜಿ ಸೆಂಟರುಗಳ ಮೇಲೆ

ಪೊಲೀಸ್ ಕಣ್ಗಾವಲು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಮಾದಕ ವ್ಯಸನಿಗಳ ತಾಣವಾಗುತ್ತಿದೆ. ದಿನನಿತ್ಯವೆಂಬಂತೆ ಇಲ್ಲಿ ಮಾದಕ ವ್ಯಸನಿಗಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸುತ್ತಿದ್ದಾರೆ. ಗಾಂಜಾ ಮಾರಾಟಗಾರರು ಮೂಟೆಗಟ್ಟಲೆ ಗಾಂಜಾ ಸಹಿತ ಸಿಕ್ಕಿ ಬೀಳುತ್ತಿದ್ದಾರೆ.

ವ್ಯಾಪಕವಾಗಿ ಗಾಂಜಾ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಅನಧಿಕೃತ ಪಿಜಿ ಸೆಂಟರುಗಳು, ಬಾಡಿಗೆ ನಿವಾಸಗಳು ಮತ್ತು ಅಪಾರ್ಟಮೆಂಟುಗಳ ಮೇಲೆ ಕಣ್ಗಾವಲು ಇರಿಸಲಿದ್ದಾರೆ. ಗಾಂಜಾ ವ್ಯಸನಿಗಳನ್ನು ಇಂತಹ ಅಪಾರ್ಟಮೆಂಟಿನಿಂದ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಪರವಾನಿಗೆ ಪಡೆದುಕೊಳ್ಳದೇ ನಡೆಸಲಾಗುತ್ತಿರುವ ಪಿಜಿ ಸೆಂಟರುಗಳಲ್ಲಿ ಇರುವ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಗಾಂಜಾ ದಾಸರಾಗಿದ್ದಾರೆ. ಇವರು ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ವಳಚ್ಚಿಲ್ ಆಸುಪಾಸು ಇರುವ ಹಲವಾರು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಡ್ರಗ್ ದಾಸರಾಗಿದ್ದು, ಇವರು ವಾಸಮಾಡಿಕೊಂಡಿರುವ ಪಿಜಿ ಸೆಂಟರುಗಳು ಅನಧಿಕೃತ ಎಂದು ಇಲಾಖೆ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇನ್ಮೇಲೆ ಇಂತಹ ವಸತಿಗೃಹಗಳ ಮೇಲೆ ಕಣ್ಣಿರಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಟ್ಟಡದ ಮಾಲಕರು ಹೆಚ್ಚಿನ ವಿಚಾರಣೆಯನ್ನೂ ನಡೆಸದೇ ಅವರಿಗೆ ರೂಂಗಳನ್ನು ನೀಡುತ್ತಿದ್ದಾರೆ. ಕಾವಲುಗಾರರು ಇಲ್ಲದಿರುವುದು ಕೂಡಾ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲಕರವಾಗಿದೆ. ಆರ್ಥಿಕವಾಗಿ ಬಲಿಷ್ಠರಾಗಿರುವ ಇವರು ಜೊತೆಯಾಗಿ ವಾಸ ಮಾಡಿಕೊಂಡಿರುವುದರಿಂದ ಐಷಾರಾಮಿ ಜೀವನ, ಮೋಜುಮಸ್ತಿಯಲ್ಲೇ ಕಾಲಕಳೆಯುತ್ತಿದ್ದಾರೆ. ಇವರ ಮೇಲೆ ನಿಗಾ ಇರಿಸುವವರೂ ಯಾರೂ ಇಲ್ಲ.

“ಇಂತಹ ವಿದ್ಯಾರ್ಥಿಗಳ ಮೇಲೆ ಆಯಾ ಕಟ್ಟಡಗಳ ಮಾಲಕರು ನಿಗಾ ಇರಿಸಬೇಕು. ಇಲ್ಲದೇ ಹೋದಲ್ಲಿ ಪೊಲೀಸರು ಇನ್ಮೇಲೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ವಾಸಮಾಡಿಕೊಂಡಿರುವ ಅನಧಿಕೃತ ಪಿಜಿ ಸೆಂಟರುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಿ ಎಂದು ಮಂಗಳೂರು ಮಹಾನಗರ ಪಾಲಿಕೆಗೆ ಸೂಚಿಸಲಿದ್ದೇವೆ” ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ಹೇಳಿದ್ದಾರೆ.

ಅಲ್ಲದೆ ವಿದ್ಯಾರ್ಥಿಗಳು ಇರುವ ಎಲ್ಲಾ ಪಿಜಿ ಸೆಂಟರುಗಳಲ್ಲಿ ಸೀಸಿಟೀವಿ ಅಳವಡಿಸಬೇಕು ಹಾಗೂ ಕಾವಲುಗಾರರನ್ನು ನಿಯೋಜನೆ ಮಾಡಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಲಿದೆ ಎಂದು ಅವರು ಹೇಳಿದ್ದಾರೆ. ಇದೀಗ ಡ್ರಗ್ಸ್ ಜಾಲದ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿರುವುದರಿಂದ ನಗರದಲ್ಲಿ ಮಾದಕ ವ್ಯಸನಿಗಳು ಕಡಿಮೆಯಾಗುತ್ತಿದ್ದಾರೆ. ಡ್ರಗ್ ಮಾರಾಟ ದಂಧೆಗೂ ಕಡಿವಾಣ ಬಿದ್ದಿದೆ ಎಂದು ಡಿಸಿಪಿ ಹೇಳಿದ್ದಾರೆ.