`ಕಲ್ಲಡ್ಕ ಘಟನೆಗೆ ಮಾದಕ ವ್ಯಸನಿಗಳ ಜಗಳ ಕಾರಣ’

 ಎಸ್ಪಿ ಬೊರಸೆ ಹೇಳಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಘರ್ಷಣೆ ಹಾಗೂ ಅಹಿತಕರ ಘಟನೆಗಳಿಗೆ  ಕೆಲ ಮಾದಕ ವ್ಯಸನಿ ಯುವಕರು ಕಾರಣರಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬರಾವ್ ಬೊರಸೆ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಬೊರಸೆ, “ಮಾದಕ ವಸ್ತುಗಳಾದ ಗಾಂಜಾ ಮುಂತಾದವುಗಳ ನಶೆಯಲ್ಲಿದ್ದ ಕೆಲ ಯುವಕರಿಂದ ಕಲ್ಲಡ್ಕದಲ್ಲಿ ಹಿಂಸೆ ಆರಂಭವಾಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಂಗಳೂರು ಹೊರತಾಗಿ ಬಂಟ್ವಾಳ ದಲ್ಲೂ ಡ್ರಗ್ಸ್ ಹಾವಳಿ ಅತಿಯಾಗಿದೆ” ಎಂದರು.

“ಡ್ರಗ್ಸ್ ಅಮಲಿನಲ್ಲಿ ಕೆಲ ಯುವಕರು ಜಗಳಕ್ಕಿಳಿದದ್ದೇ  ಆರು ಜನರಿಗೆ ಗಾಯಗಳುಂಟಾದ ಮೇ 26ರ ಹಿಂಸಾತ್ಮಕ ಘಟನೆಗೆ ಕಾರಣ” ಎಂದು ಅವರು ಹೇಳಿದರು.

“ಫರಂಗಿಪೇಟೆ ಮತ್ತು ಮಾರಿಪಳ್ಳ ಮುಂತಾದೆಡೆ ಡ್ರಗ್ಸ್ ಹಾವಳಿ ಅತಿಯಾಗಿದೆ. ಇಲ್ಲಿ ಹಲವಾರು  ವಿದ್ಯಾಸಂಸ್ಥೆಗಳಿದ್ದು ವಿದ್ಯಾರ್ಥಿಗಳೂ ಡ್ರಗ್ಸ್ ಜಾಲಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿದೆ” ಎಂದು ಪೊಲೀಸ್ ಇಲಾಖೆಯ ಮೂಲವೊಂದು ತಿಳಿಸಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಜಾಲ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದ್ದು. ಡ್ರಗ್ಸ್ ಮಾರಾಟಗಾರರು ಮಂಗಳೂರು ನಗರ ಸುರತ್ಕಲ್, ಕಾವೂರು, ಪಣಂಬೂರು ಮತ್ತು ಬಜ್ಪೆಯಲ್ಲಿ ಅತಿ ಹೆಚ್ಚು ಸಕ್ರಿಯರಾಗಿದ್ದಾರೆ ಹಾಗೂ ಇಲ್ಲಿಗೆ ಗಾಂಜಾವನ್ನು ಹಾಸನ, ಚಿಕ್ಕಮಗಳೂರರು ಮತ್ತು ಶಿವಮೊಗ್ಗ ಮುಂತಾದೆಡೆಗಳಿಂದ ಅಕ್ರಮವಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.