ಮುಲ್ಕಿ ಬಸ್ ತಂಗುದಾಣದಲ್ಲಿ ಮದ್ಯವ್ಯಸನಿಯ ದಾಂದಲೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಮದ್ಯವ್ಯಸನಿಯೊಬ್ಬ ವಿಪರೀತ ಮದ್ಯ ಸೇವಿಸಿ ನಿಲ್ದಾಣದಲ್ಲಿ ಕುಳಿತ ಪ್ರಯಾಣಿಕರನ್ನು ಅವಾಚ್ಯವಾಗಿ ನಿಂದಿಸಿ ದಾಂದಲೆ ನಡೆಸುತ್ತಿದ್ದ. ಕೂಡಲೇ ಸ್ಥಳೀಯ ಸಮಾಜ ಸೇವಕ ಗೋವಿಂದ ಕೋಟ್ಯಾನ್ ಮತ್ತಿತರರು ಆತನನ್ನು ನಿಲ್ದಾಣದ ಹಿಂದುಗಡೆ ಕರೆದುಕೊಂಡು ಹೋಗಿ ತಲೆಗೆ ನೀರು ಹಾಕಿ ಮದ್ಯದ ಅಮಲು ಇಳಿಸಲು ಪ್ರಯತ್ನಿಸಿ ಎಚ್ಚರಿಕೆ ನೀಡಿದ್ದರೂ ಫಲಕಾರಿಯಾಗಿರಲಿಲ್ಲ. ಬಳಿಕ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮದ್ಯವ್ಯಸನಿಯನ್ನು ವಶಕ್ಕೆ ಪಡೆದಿದ್ದಾರೆ.

ಮದ್ಯವ್ಯಸನಿಯನ್ನು ಮುಲ್ಕಿ ಸಮೀಪದ ಮಟ್ಟು ನಿವಾಸಿ ರಾಜೇಶ್ ಎಂದು ಗುರುತಿಸಲಾಗಿದೆ. ಆತ ವೃತ್ತಿಯಲ್ಲಿ ಪೈಂಟರ್ ಆಗಿ ದಿಡಿಯುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚೆಗೆ ಮುಲ್ಕಿ ಬಸ್ ನಿಲ್ದಾಣ ಕುಡುಕರ ಕೇಂದ್ರವಾಗುತ್ತಿದ್ದು, ಪ್ರಯಾಣಿಕರು ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.