`ರಾಜ್ಯಪಾಲರಿಗೆ ಬರ ವರದಿ ಸಲ್ಲಿಸಲಾಗಿದೆ’

ಮಂಗಳೂರು : ಈ ವರ್ಷ ರಾಜ್ಯದಲ್ಲಿ ವಿಪರೀತವಾಗಿ ಕಾಡಿರುವ ಬರ ಸ್ಥಿತಿ ಬಗ್ಗೆ ಹಾಗೂ ಇದಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ವರದಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತ, “ರಾಜ್ಯಕ್ಕೆ  ಎಐಸಿಸಿ ವೀಕ್ಷಕರಾಗಿರುವ ವೇಣುಗೋಪಾಲ್ ಜತೆ ಮುಂಬರುವ ಚುನಾವಣಾ ವಿಷಯ ಬಿಟ್ಟರೆ ಇನ್ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ. ಅಲ್ಲದೆ ರಾಜ್ಯ ನಾಯಕರ ವಿರುದ್ಧ ಅವರಿಗೆ ಯಾರೂ ದೂರು ಕೂಡಾ ನೀಡಿಲ್ಲ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರವನ್ನೂ ಚರ್ಚಿಸಿಲ್ಲ. ಈ ಬಗ್ಗೆ ಹೈಕಮಾಂಡ್ ಅಂತಿಮವಾಗಿ ಒಂದು ಒಮ್ಮತದ ನಿರ್ಣಯಕ್ಕೆ ಬರಲಿದೆ ” ಎಂದರು.

ಮುಖ್ಯಮಂತ್ರಿ ಪುತ್ರನ ವಿರುದ್ಧ ಬೇನಾಮಿ ಆಸ್ತಿಯ ಕುರಿತಾಗಿ ದೂರು ನೀಡಲಾಗಿದೆಯಲ್ಲಾ ಎಂಬ ಪ್ರಶ್ನೆಗೆ  ಪ್ರತಿಕ್ರಿಯೆ ನೀಡಿದ ಅವರು “ಇದು ರಾಜಕೀಯ ಪ್ರೇರಿತ ಪಿತೂರಿ, ಆಧಾರರಹಿತ ಆರೋಪ ” ಎಂದರು. ಸರಕಾರದ ನಾಲ್ಕು ವರ್ಷದ ಸಾಧನೆ ಬಗ್ಗೆ ಜನತೆಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.