ಖಾಸಗಿ, ಸರಕಾರಿ ಕಾರ್ಯಕ್ರಮಗಳಲ್ಲಿ ಡ್ರೋನ್ ಬಳಸಿದರೆ ಕ್ರಮ : ಸೂಚನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮದುವೆ ಮುಂತಾದ ಖಾಸಗಿ ಕಾರ್ಯಕ್ರಮಗಳಲ್ಲಿ ಅತ್ಯದ್ಭುತ ಛಾಯಾಚಿತ್ರಗಳನ್ನು ತೆಗೆಯಬೇಕೆಂಬ ಮಹದಾಸೆಯಿಂದ ಡ್ರೋನ್ ಬಳಸಲು ನೀವೇನಾದರೂ ನಿರ್ಧರಿಸಿದಲ್ಲಿ ನೀವು ತೊಂದರೆಯಲ್ಲಿ ಸಿಲುಕಬಹುದು. ಭದ್ರತಾ ಕಾರ್ಯಗಳಿಗೆ ಹೊರತಾಗಿ ಬೇರೆ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಯಾ ಸರಕಾರಿ ಕಾರ್ಯಕ್ರಮಗಳಲ್ಲಿ ಡ್ರೋನ್ ಬಳಸುವವರ ಮೇಲೆ ನಿಗಾ ಇಡಲು ಹಾಗೂ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರವಿದೆ.

ಅಕ್ಟೋಬರ್ 2014ರಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆಯೊಂದನ್ನು ಗುಪ್ತಚರ ಇಲಾಖೆ ಉಲ್ಲೇಖಿಸಿದೆ. ಏಪ್ರಿಲ್ 2016ರಲ್ಲಿ ಡಿಜಿಸಿಎ ಡ್ರೋನ್ ಬಳಕೆ ಕುರಿತಾದ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದ್ದು, ಇದರನ್ವಯ ಡ್ರೋನ್ ಬಳಕೆದಾರರು ಅನುಮತಿ ಪಡೆದು ತಮಗಾಗಿ ಒಂದು ವಿಶಿಷ್ಟ ಗುರುತಿನ ಸಂಖ್ಯೆ ಪಡೆಯಬೇಕಾಗಿದೆ. ವಾಯು ಕ್ಷೇತ್ರದ ಭದ್ರತೆಯ ದೃಷ್ಟಿಯಿಂದ ಇಂತಹ ಡ್ರೋನ್ ಬಳಕೆಯನ್ನು ನಿಯಂತ್ರಿಸುವ ಉದ್ದೇಶವನ್ನು ಈ ಸುತ್ತೋಲೆ ಹೊಂದಿದೆ.

ಈ ಡಿಜಿಸಿಎ ಸುತ್ತೋಲೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಅವರು ಪೊಲೀಸ್ ವಾಟ್ಸ್ಯಪ್ ಗ್ರೂಪಿನಲ್ಲಿ ಪೋಸ್ಟ್ ಮಾಡಿದ್ದಾರೆ. ಸರಕಾರಿ ಸಮಾರಂಭಗಳ ಸಂದರ್ಭ ಕೂಡ ಡ್ರೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಡ್ರೋನ್ ಬಳಕೆ ಕಂಡುಬಂದಿದ್ದೇ ಆದಲ್ಲಿ ಹಾಗೂ ಪ್ರಮುಖ ಸ್ಥಳಗಳ ಹತ್ತಿರ ಡ್ರೋನ್ ಉಪಯೋಗ ಪತ್ತೆಯಾದಲ್ಲಿ ಅವುಗಳನ್ನು ವಶಪಡಿಸಿಕೊಳ್ಳುವಂತೆ ಯಾ ನಾಶಗೊಳಿಸುವಂತೆ ಪೊಲೀ ಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ

“ಡ್ರೋನ್ ಮಾಲಕರು ಹಾಗೂ ಅದರ ನಿರ್ವಾಹಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು” ಎಂದು ಎಚ್ಚರಿಸಿರುವ ಎಸ್ಪಿ ಹವ್ಯಾಸಿಗಳು ಕೂಡ ಡ್ರೋನ್ ಬಳಸುವುದು ನಿಷೇಧಿಸಲಾಗಿದೆ ಎಂದಿದ್ದಾರೆ.