ಬಸ್ ಬ್ರೇಕ್ ಫೇಲಾದರೂ ಚಾಲಕನ ಸಮಯಪ್ರಜ್ಞೆ ಪ್ರಯಾಣಿಕರನ್ನು ಉಳಿಸಿತು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ಟೇಟ್ ಬ್ಯಾಂಕಿನಿಂದ ಬೊಂದೇಲ್ ಕಡೆಗೆ ಬರುತ್ತಿದ್ದ ನಗರ ಸಾರಿಗೆ ಖಾಸಗಿ ಬಸ್ ಬ್ರೇಕ್ ಫೇಲಾದ ಕಾರಣ ಸಮಯೋಚಿತ ಚಾಲನೆ ಮಾಡಿದ ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತಂದು ಆತಂಕ ದೂರ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಸೈಂಟ್ ಅಲೋಶಿಯಸ್ ಕಾಲೇಜಿನ ಮಾರ್ಗವಾಗಿ ಬರುತ್ತಿದ್ದ ರೂಟ್ ನಂಬರ್ 14ಎ ಹಂಪನಕಟ್ಟೆ ಮತ್ತು ಬೊಂದೇಲ್ ನಡುವೆ ಸಂಚರಿಸುತ್ತಿದ್ದು, ಪ್ರಯಾಣಿಕರನ್ನು ಹೊತ್ತು ಬೊಂದೇಲ್ ಕಡೆಗೆ ಬರುತ್ತಿತ್ತು. ಈ ಸಂದರ್ಭ ಅದರಲ್ಲಿ ಚಾಲಕನಾಗಿ ಶ್ರೀಕಾಂತ್ ಕಾರ್ಯನಿರ್ವಹಿಸುತ್ತಿದ್ದು, ಲೈಟ್ ಹೌಸ್ ಹಿಲ್ ರಸ್ತೆ ಮಾರ್ಗವಾಗಿ ಬರುತ್ತಿದ್ದಾಗ ಬಸ್ ಬ್ರೇಕ್ ಫೇಲ್ ಆಗಿದೆ. ಕೂಡಲೇ ಸಮಯೋಚಿತ ಚಾಲನೆ ಮಾಡಿದ ಶ್ರೀಕಾಂತ್ ಬಸ್ಸನ್ನು ಬಲ್ಮಠದಲ್ಲಿ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರ ಸಮಯೋಚಿತ ಚಾಲನೆ ಕಂಡು ಪ್ರಯಾಣಿಕರು ನಿಟ್ಟುಸಿರು ಬಿಟ್ಟರಲ್ಲದೇ ಎಲ್ಲರೂ ಚಾಲಕನನ್ನು ಶ್ಲಾಘಿಸಿದರು.