ಪಡುಬಿದ್ರಿ ತಂಗುದಾಣದಲ್ಲಿ ಬಸ್ ಅಡ್ಡವಿಟ್ಟು ಚಾಲಕನ ಗೂಂಡಾಗಿರಿ

ಕೆಲಕಾಲ ಸಂಚಾರ ಅಸ್ತವ್ಯಸ್ತ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಟೈಂ ವಿಚಾರಕ್ಕೆ ಸಂಬಂಧಿಸಿ ಚಾಲಕನೊಬ್ಬ ಮತ್ತೊಂದು ಬಸ್ಸಿಗೆ ಪಡುಬಿದ್ರಿ ಮುಖ್ಯ ಪೇಟೆಯಲ್ಲೇ ಬಸ್ ಅಡ್ಡವಿಟ್ಟು ಗೂಂಡಾಗಿರಿ ಪ್ರದರ್ಶಿಸಿದ್ದರಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಖಾಸಗಿ ಬಸ್ಸುಗಳೆರಡು ಕಂಬಳದ ಕೋಣಗಳಂತೆ ಪೈಟೋಟಿಯಿಂದ ಪಡುಬಿದ್ರಿ ಪೇಟೆ ಪ್ರವೇಶಿಸಿ ಒಂದು ಬಸ್ ನಿಲ್ಲುತ್ತಿದಂತೆ ಎಸ್ ವಿ ಎಂ ಎಸ್ ಚಾಲಕ ಬಸ್ಸನ್ನು ಹೆದ್ದಾರಿ ಮಧ್ಯೆ ಅಡ್ಡವಿಟ್ಟು, ಬಸ್ಸಿಂದಿಳಿದು ಮತ್ತೊಂದು ಬಸ್ಸಿನ ಚಾಲಕನ ಬದಿಯ

ಬಾಗಿಲನ್ನು ಆಕ್ರೋಶದಿಂದಲೇ ತೆರೆದು, ಹಲ್ಲೆ ನಡೆಸುತ್ತಾನೋ ಎಂಬಂತೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವೇಳೆ ಪೇಟೆ ಪ್ರದೇಶದಲ್ಲಿ ಪೊಲೀಸರು ಇಲ್ಲದ ಪರಿಣಾಮ ಕೆಲ ಹೊತ್ತು ವಾಗ್ವಾದ ನಡೆದಿದ್ದು, ಆ ಬಳಿಕ ಬಸ್ಸಿನ ಹಿರಿಯ ನಿರ್ವಾಹಕರೊಬ್ಬರು ಆತನನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭ ಸಿನಿಮಾ ಚಿತ್ರೀಕರಣ ನಡೆಯುತ್ತಿದೆಯೋ ಎಂಬಂತೆ ಅಲ್ಲಲ್ಲಿ ನಿಂತು ಸಾರ್ವಜನಿಕರು ವಿಕ್ಷೀಸುತ್ತಿದ್ದರು.

ಅಂತಿಮವಾಗಿ ಬಸ್ ಅಡ್ಡವಿಟ್ಟು ಗೂಂಡಾನಂತೆ ವರ್ತಿಸಿದ ಚಾಲಕನ ವಿರುದ್ಧ ಸಾರ್ವಜನಿಕ ಶಾಂತಿ ಭಂಗ ಕೇಸುದಾಖಲಿಸುವಂತೆ ಪೊಲೀಸ್ ಇಲಾಖೆಯನ್ನು ಸ್ಥಳೀಯರು ಆಗ್ರಹಿಸಿದ್ದಾರೆ.