ರಸ್ತೆಯ ಗುಂಡಿ ತಪ್ಪಿಸುವ ಭರದಲ್ಲಿ ಕಾರು ರಿಕ್ಷಾಕ್ಕೆ ಡಿಕ್ಕಿ ಚಾಲಕ ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರದಿಂದ ಕೆದಂಬಾಡಿಗೆ ತೆರಳಲು ಪ್ರಧಾನ ಮಂತ್ರಿ ಸಡಕ್ ಯೋಜನೆಯಿಂದ ನಿರ್ಮಿಸಲಾದ ರಸ್ತೆಯು ಕಾಮಗಾರಿ ಮುಗಿದು ಅಲ್ಪ ಸಮಯದಲ್ಲೇ ಗುಂಡಿಗಳು ನಿರ್ಮಾಣವಾದ ಈ ರಸ್ತೆಯಲ್ಲಿ ಇದೀಗ ಅಪಘಾತಗಳು ಸಂಭವಿಸುತ್ತಲೇ ಇದೆ.
ಸೋಮವಾರ ಮಧ್ಯಾಹ್ನ ಸ್ವಿಫ್ಟ್ ಕಾರೊಂದು ಇದೇ ರಸ್ತೆಯಲ್ಲಿರುವ ಗುಂಡಿ ತಪ್ಪಿಸಲೆತ್ನಿಸುವಾಗ ಎದುರಿನಿಂದ ಆಗಮಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಪಾವೂರು ಚರ್ಚ್ ಪರಿಸರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆದಂಬಾಡಿ ನಿವಾಸಿ ಅನ್ಸಾರ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿ. ಈ ಅಪಘಾತದಲ್ಲಿ ರಿಕ್ಷಾ ಸಂಪೂರ್ಣವಾಗಿ ನುಜ್ಜುಗುಜಾಗಿದೆ. ರಸ್ತೆಯಲ್ಲಿ ಮರಣಗುಂಡಿಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವೆಂಬುದಾಗಿ ಚಾಲಕರು ಹೇಳುತ್ತಿದ್ದಾರೆ. ಸೋಮವಾರ ಸಂಜೆ ಕೂಡಾ ಕೆದಂಬಾಡಿ ಪರಿಸರದಲ್ಲಿ ರಸ್ತೆಯ ಗುಂಡಿಯನ್ನು ತಪ್ಪಿಸುವಾಗ ಎರಡು ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ಒಬ್ಬರು ಕಾಲಿಗೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ರಸ್ತೆ ಕಳಪೆ ಕಾಮಗಾರಿಯಿಂದಾಗಿ ಇಂದು ಈ ಸ್ಥಿತಿ ಬಂದೊದಗಿರುವುದಾಗಿ ಊರವರು ಹೇಳುತ್ತಿದ್ದಾರೆ.