ಅಂಬುಲೆನ್ಸಿನಲ್ಲಿ ಮದ್ಯ ಸಾಗಾಟ ನಾಲ್ಕು ಬಾಟ್ಲಿ ಸಹಿತ ಚಾಲಕ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸಮಾಜ ಸೇವೆಯ ಭಾಗವಾಗಿ ಪ್ರವಾಸಿ ಸಂಘಟನೆಯಿಂದ ಲಭಿಸಿದ ಅಂಬುಲೆನ್ಸಿನಲ್ಲಿ ಮದ್ಯ ಸಾಗಾಟ ಪತ್ತೆ ಹಚ್ಚಲಾಯಿತು. ಈ ಸಂಬಂಧ ಚಾಲಕನನ್ನು ಬಂಧಿಸಲಾಗಿದೆ.
ಮಡಿಕೈ ನಿವಾಸಿ ನಾಲ್ಕು ಬಾಟ್ಲಿ ಮದ್ಯದೊಂದಿಗೆ ಸೆರೆಗೀಡಾದ ವ್ಯಕ್ತಿ. ಮಂಗಳೂರಿನಿಂದ ಮರಳುತ್ತಿರುವಾಗ ನಾಲ್ಕು ಬಾಟಲಿ ಮದ್ಯವನ್ನು ಖರೀದಿಸಿ ಅಂಬುಲೆನ್ಸಿನಲ್ಲಿ ಇಡಲಾಗಿತ್ತು. ಕಾಞಂಗಾಡ್ ಅಜನೂರು ಇಕ್ಬಾಲ್ ಜಂಕ್ಷನಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವ ಮಧ್ಯೆ ಅಂಬುಲೆನ್ಸಿನಲ್ಲಿ ಮದ್ಯ ಪತ್ತೆಯಾಗಿದೆ. ಕೂಡಲೇ ಅಂಬುಲೆನ್ಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ಯಲಾಯಿತು. 24 ವರ್ಷ ಪ್ರಾಯದ ಚಾಲಕನನ್ನು ಬಂಧಿಸಲಾಯಿತಾದರೂ ಒತ್ತಡದ ಮೇರೆಗೆ ಅಂಬುಲೆನ್ಸನ್ನು ಬಿಡಲಾಗಿದೆ ಎಂದು ತಿಳಿದುಬಂದಿದೆ.
ಕೆಂಪು ದೀಪ ಹಾಕಿ ಸೈರಾನ್ ಮೊಳಗಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮಿತ ವೇಗದಲ್ಲಿ ಸಾಗುತ್ತಿರುವ ಅಂಬುಲೆನ್ಸುಗಳಲ್ಲಿ ವ್ಯಾಪಕವಾಗಿ ಮದ್ಯ ಸೇರಿದಂತೆ ಹಲವು ರೀತಿಯ ಮಾದಕ ಸಾಮಗ್ರಿಗಳು ಸಾಗಾಟವಾಗುತ್ತಿದೆಂಬ ಆರೋಪಗಳು ಈ ಹಿಂದೆಯೇ ಕೇಳಿ ಬಂದಿತ್ತು.