ಮರಕ್ಕೆ ಬೈಕ್ ಡಿಕ್ಕಿ

ಅಪಘಾತದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಯುವಕರು

ಡ್ರಿಂಕ್ & ಡ್ರೈವಿಗೆ ಇಬ್ಬರು ಬಲಿ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಮಂಗಳವಾರ ತಡರಾತ್ರಿ ಯುವಕರಿಬ್ಬರು ಕುಡಿದು ಬೈಕ್ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ನಡೆದಿದೆ.

ಕುಕ್ಕುಂದೂರು ಜೋಡುರಸ್ತೆಯ ನಿವಾಸಿ ರಕ್ಷಿತ್ (20) ಹಾಗೂ ನಿಟ್ಟೆ ಗ್ರಾಮದ ಅತ್ತೂರು ಪದವು ನಿವಾಸಿ ಅರುಣ್ ನಾಯ್ಕ್ (22) ಸಾವನ್ನಪ್ಪಿರುವ ಯುವಕರು. ಇವರಿಬ್ಬರು ಕಾರ್ಕಳದ ಬಾರಿನಲ್ಲಿ ತಡರಾತ್ರಿಯವರೆಗೂ ಕುಡಿದು ಬಳಿಕ ಮಧ್ಯರಾತ್ರಿ ಸುಮಾರು 12.15ರ ವೇಳೆಗೆ ಬೈಕಿನಲ್ಲಿ ರಕ್ಷಿತ್ ಎಂಬವರನ್ನು ಅವರ ಮನೆಯಾದ ಜೋಡುರಸ್ತೆಗೆ ಬಿಡಲು ಕಾರ್ಕಳದಿಂದ ಜೋಡುರಸ್ತೆಯ ಕಡೆಗೆ ಅತ್ಯಂತ ವೇಗವಾಗಿ ಹೋಗುತ್ತಿದ್ದಾಗ ಬೈಕ್ ಕುಕ್ಕುಂದೂರು ದೇವಳದ ದ್ವಾರದ ಬಳಿ ತಲುಪುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡು ಎಡಭಾಗದಲ್ಲಿದ್ದ ಬೃಹತ್ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪಿದ್ದಾರೆ.

ತಡರಾತ್ರಿ ಈ ದುರ್ಘಟನೆ ನಡೆದಿದ್ದು, ಜೋಡುರಸ್ತೆಯಲ್ಲಿ ನೈಟ್ ಬೀಟಿನಲ್ಲಿದ್ದ ಪೊಲೀಸರು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಬೈಕ್ ನೋಡಿ ಸುತ್ತಮುತ್ತಲಿನಲ್ಲಿ ಹುಡುಕಾಡಿದಾಗ ಯುವಕರಿಬ್ಬರು ಮರದ ಕೆಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಪಘಾತದ ತೀವ್ರತೆಗೆ ಯುವಕರ ತಲೆಗೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದರು. ಬೈಕ್ ಚಾಲನೆಯ ವೇಳೆ ಯುವಕರಿಬ್ಬರು ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.