ಕಾರ್ಕಳ ಗಾಂಧೀ ಮೈದಾನ ಬಾವಿಗಳಿಗೆ ಚರಂಡಿ ನೀರು

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಕಾರ್ಕಳ ಪುರಸಭೆ ವ್ಯಾಪ್ತಿಯ ಗಾಂಧಿಮೈದಾನ ಪ್ರದೇಶದಲ್ಲಿ ಅಸಮರ್ಪಕ ಒಳಚರಂಡಿ ವ್ಯಸ್ಥೆಯಿಂದಾಗಿ ಚರಂಡಿ ನೀರು ಬಾವಿಗೆ ಸೇರಿ ಆ ಭಾಗದ 10ಕ್ಕೂ ಅಧಿಕ ಕುಡಿಯುವ ನೀರಿನ ಬಾವಿಗಳು ಕಲುಷಿತಗೊಂಡಿವೆ. ಸ್ಥಳೀಯ ನಾಗರಿಕರು ಕುಡಿಯಲು ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ಇದೇ ಬಾವಿಯ ನೀರನ್ನು ಬಳಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಈ ನೀರು ಬಳಸುತ್ತಿದ್ದ ಮನೆಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡು ಅದಕ್ಕೆ ಕಾರಣ ಹುಡುತ್ತಾ ಹೋದಾಗ ಬಾವಿ ನೀರು ಕಲುಷಿತಗೊಂಡಿರುವುದು ತಿಳಿದುಬಂದಿದೆ. ಕಲುಷಿತಗೊಂಡ ನೀರನ್ನು ಬಳಸುತ್ತಿದ್ದರಿಂದಲೇ ಮನೆಮಂದಿ ಅನಾರೋಗ್ಯಪೀಡಿತರಾಗಿದ್ದು ಕಂಡುಬಂದಿದೆ.

ಈ ಪರಿಸರದಲ್ಲಿ ಸುಮಾರು 27 ವರ್ಷಗಳ ಹಿಂದೆ 6 ಕಿ ಮೀ ವ್ಯಾಪ್ತಿಗೆ ಸೀಮಿತವಾಗಿ ನಿರ್ಮಿಸಲಾದ ಒಳಚರಂಡಿ ಅವೈಜ್ಞಾನಿಕವಾಗಿರುವುದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ. ಇಷ್ಟೇ ಅಲ್ಲದೆ ಈ ಒಳಚರಂಡಿಯಿಂದಾಗಿ ಆನೆಕೆರೆ, ಹಿರಿಯಂಗಡಿ, ಕಾಬೆಟ್ಟು ಪರಿಸರದಲ್ಲಿ ಫಲವತ್ತಾದ ಕೃಷಿ ಭೂಮಿ ಕೂಡ ನಶಿಸಿದ್ದು, ಕುಡಿಯಲು ಉಪಯೋಗಿಸುತ್ತಿದ್ದ ಸ್ವಚ್ಛ ಬಾವಿ ನೀರು ಕಲುಷಿತಗೊಂಡು ಗಬ್ಬುನಾತ ಬೀರುತ್ತಿದೆ. ಅದ್ದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಮಾತ್ರವಲ್ಲದೆ ಆಸ್ಪತ್ರೆಗೂ ದಾಖಲಾಗಿದ್ದಾರೆ.

ನಗರದ ಪ್ರಮುಖ ತ್ಯಾಜ್ಯ ಹರಿದು ಹೋಗುವ ಭಾರೀ ಗಾತ್ರದ ಒಳಚರಂಡಿ ಪೈಪೊಂದು ಆನೆಕೆರೆ ಮೂಲಕ ಸಾಗಿ ಆನೆಕೆರೆ ಬಳಿ ಈ ಪೈಪ್ ಬಿರುಕು ಬಿಟ್ಟಿದ್ದು ತ್ಯಾಜ್ಯ ಹೊರಬಂದು ಪಕ್ಕದ ಕಾಲುವೆÀಯಲ್ಲಿ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ತ್ಯಾಜ್ಯ ಇರುವ ಕಾಲುವೆಯ ಇನ್ನೊಂದು ಪಾಶ್ವದಲ್ಲಿ ಇರುವ ವೀರಭದ್ರ ದೇವಸ್ಥಾನದ ಬಳಿಯ ಹಲವು ಮನೆಯ ಬಾವಿಗಳಿಗೂ ಈ ನೀರು ಸೇರಿ ಕಲುಷಿತಗೊಂಡಿದೆ. ಅಲ್ಲದೆ ಈ ತ್ಯಾಜ್ಯದ ವಿಷಜಲದಿಂದಾಗಿ ಬಾವಿಯಲ್ಲಿರುವ ಜಲಚರಗಳು ಕೂಡ ಜೀವ ಕಳೆದುಕೊಂಡು ನೀರಿನಲ್ಲಿ ತೇಲುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಹಾದುಹೋಗಿರುವ ಒಳಚರಂಡಿ ದುರವಸ್ಥೆಯಿಂದಾಗಿ ಅದರ ಆಸುಪಾಸಿನಲ್ಲಿರುವ ಅನಂತಶಯನ, ಮಾರ್ಕೆಟ್ ರಸ್ತೆ, ಮೂರು ರಸ್ತೆ, ವೆಂಕಟರಮಣ ದೇವಳ, ಆನೆಕೆರೆ, ಕಾಬೆಟ್ಟು, ಬಂಡೀಮಠ ಪರಿಸರದ ಬಾವಿಗಳು ಇದೇ ಪರಿಸ್ಥಿತಿಯಲ್ಲಿವೆ. ಕೆಲವು ಕಡೆಗಳಲ್ಲಿ ಪುರಸಭೆ ಒಳಚರಂಡಿ ದುರಸ್ತಿಪಡಿಸಿ ಕಲುಷಿತಗೊಂಡ ಬಾವಿಗಳನ್ನು ಸ್ವಚ್ಚಗೊಳಿಸಿ ನೀರು ಬಳಸಲು ಯೋಗ್ಯವಾಗುವಂತೆ ಅನುವು ಮಾಡಿಕೊಟ್ಟಿದೆ. ಆದರೂ ನೀರಿನ ತತ್ವಾರ ಎದುರಿಸುತ್ತಿರುವ ಈ ದಿನಗಳಲ್ಲಿ ಈ ಕಾರ್ಯ ಇನ್ನಷ್ಟು ತ್ವರಿತಗತಿಯಲ್ಲಿ ನಡೆಯಬೇಕೆನ್ನುವುದು ಕಾರ್ಕಳ ನಾಗರಿಕರ ಒತ್ತಾಯ.