ಪರಂಬೋಕು ತೋಡಿನಲ್ಲಿದ್ದ ಶೌಚಗುಂಡಿ ತೆರವು

ಜೆಸಿಬಿಯಿಂದ ಶೌಚಗುಂಡಿ ತೆರವುಗೊಳಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಮಾರ್ಪಾಡಿ ಗ್ರಾಮದ ಗಾಂಧಿನಗರ ಎಂಬಲ್ಲಿ ಪರಂಬೋಕು ಜಾಗದಲ್ಲಿದ್ದ ವಾಣಿಜ್ಯ ಸಂಕೀರ್ಣವೊಂದರ ಶೌಚಗುಂಡಿಯನ್ನು ತಹಶೀಲ್ದಾರ್ ಸೂಚನೆಯಂತೆ ಪುರಸಭೆ ಅಧಿಕಾರಿಗಳು ಶುಕ್ರವಾರ ಜೆಸಿಬಿ ಬಳಸಿ ತೆರವುಗೊಳಿಸಿದರು.

ಸುಂದರ ನಾರಾಯಣ ಪೂಜಾರಿ ಒಡೆತನದ ವಾಣಿಜ್ಯ ಸಂಕೀರ್ಣ ನಿಯಮ ಉಲ್ಲಂಘಿಸಿ ಪರಂಬೋಕು ಜಾಗದಲ್ಲಿ ಶೌಚಗುಂಡಿ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಬೇಕೆಂದು ದಿನೇಶ್ ಪೂಜಾರಿ ಎಂಬವರು ತಹಶೀಲ್ದಾರಗೆ ಹಾಗೂ ಪುರಸಭೆಗೆ ದೂರು ನೀಡಿದ್ದರು. ಇತ್ತೀಚೆಗೆ ಮೂಡುಬಿದಿರೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಗದೀಶರಿಗೂ ಈ ಬಗ್ಗೆ ಅವರು ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಜಿಲ್ಲಾಧಿಕಾರಿ ಸೂಚನೆಯಂತೆ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಶೌಚಗುಂಡಿಯನ್ನು ತೆರವುಗೊಳಿಸಿದರು.

ಈ ಬಗ್ಗೆ ತಹಶೀಲ್ದಾರರು ನವೆಂಬರ್ 21ರಂದು ನೋಟಿಸು ನೀಡಿ ಡಿಸೆಂಬರ್ 5ರೊಳಗೆ  ಅವಹಾಲುಗಳಿದ್ದರೆ ತಿಳಿಸುವಂತೆ ಕಾಲಾವಕಾಶ ನೀಡಿದ್ದರು. ಅದಕ್ಕೆ ಮೊದಲೆ ತೆರವುಗೊಳಿಸಿರುವುದು ನ್ಯಾಯಸಮ್ಮತ ಕ್ರಮ ಅಲ್ಲ ಎಂದು ಕಟ್ಟಡ ಮಾಲಿಕ ಸುಂದರ ಪೂಜಾರಿ ಹೇಳಿದ್ದಾರೆ.

ಅತಿಕ್ರಮಣ ತೆರವು ದೂರಿನ ಹಿಂದೆ ಸಾರ್ವಜನಿಕ ಹಿತಾಸಕ್ತಿಗಿಂತ ಸ್ವಹಿತಾಸಕ್ತಿ ಪ್ರಧಾನವಾಗಿದ್ದು ತೆರೆಮರೆಯಲ್ಲಿ ಪುರಸಭೆ ಸದಸ್ಯರೊಬ್ಬರು ಕೈಯಾಡಿಸಿದ್ದಾರೆ ಎಂಬ ಆರೋಪಗಳು ಸ್ಥಳೀಯವಾಗಿ ಕೇಳಿಬಂದಿದೆ.