ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ದೂರು

ಸಾಂದರ್ಭಿಕ ಚಿತ್ರ

ಕಾರ್ಕಳ : ಪತಿ ಹಾಗೂ ಆತನ ಮನೆಯವರು ಸೇರಿ ವರದಕ್ಷಿಣೆ ನೀಡುವಂತೆ ಪತ್ನಿ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ನೊಂದ ಮಹಿಳೆಯೊಬ್ಬರು ಕಾರ್ಕಳ ಗ್ರಾಮಾಂತರ ದೂರು ನೀಡಿದ್ದಾರೆ.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ತಾಕರಬೆಟ್ಟು ಎಂಬಲ್ಲಿನ ಸಂಧ್ಯಾ (26) ಎಂಬ ಮಹಿಳೆ ತನ್ನ ಗಂಡ ಮಂಜುನಾಥ, ಅತ್ತೆ ಜಲಜಾ(50), ಮಾವ ಸದಾಶಿವ (60) ಹಾಗೂ ನಾದಿನಿ ಮಂಜುಳಾ ಸೇರಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಧ್ಯಾ ಅವರಿಗೆ 2017ರ ಜನವರಿ 15ರಂದು ಪಡುಬಿದ್ರೆ ನಡ್ಸಾಲು ಗ್ರಾಮದ ಕಂಚಿನಡ್ಕ ನಿವಾಸಿ ಮಂಜುನಾಥ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ವರನಿಗೆ 1 ಲಕ್ಷ ನಗದು ಹಾಗೂ 20 ಪವನ್ ಚಿನ್ನಾಭರಣಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದರು. ಮದುವೆಯಾದ ತಿಂಗಳ ಬಳಿಕ ಗಂಡ ಮಂಜುನಾಥ ಹಾಗೂ ಆತನ ಮನೆಯವರು ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸಿ ಕಿರುಕುಳ ನೀಡಿದ್ದಾರೆ ಎಂದು ಸಂಧ್ಯಾ ದೂರಿನಲ್ಲಿ ಆರೋಪಿಸಿದ್ದಾರೆ.

ಇದಾದ ಬಳಿಕ ಕಳೆದ ಏ 23ರಂದು ಮಾತುಕತೆಗೆಂದು ಗಂಡನ ಮನೆಯವರು ನಿಟ್ಟೆಯಲ್ಲಿ ಸಂಧ್ಯಾರ ತವರು ಮನೆಗೆ ಬಂದಿದ್ದ ವೇಳೆ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಸಂಧ್ಯಾ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.