ಅಪ್ರಾಪ್ತೆಯ ಅತ್ಯಾಚಾರಗೈದ ಪಾದ್ರಿಗೆ ಡಬಲ್ ಜೀವಾವಾಧಿ ಶಿಕ್ಷೆ

ಎರ್ನಾಕುಲಂ : ಹದಿನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ನ್ಯಾಯಾಲಯವೊಂದು ಕ್ಯಾಥೋಲಿಕ್ ಪಾದ್ರಿಯೊಬ್ಬರಿಗೆ ಡಬಲ್ ಜೀವಾವಧಿ ಶಿಕ್ಷೆ ಹಾಗೂ ರೂ 2.15 ಲಕ್ಷ ದಂಡ ವಿಧಿಸಿದೆ. ಪೋಕ್ಸೋ ಕಾಯಿದೆಯ ಅನ್ವಯ ಕೇರಳದ ಧಾರ್ಮಿಕ ಗುರುವೊಬ್ಬರಿಗೆ ಶಿಕ್ಷೆಯಾದ  ಪ್ರಥಮ ಪ್ರಕರಣವಿದು ಎಂದು ಹೇಳಲಾಗಿದೆ.

ಆರೋಪಿ ಎಡ್ವಿನ್ ಫಿಗರೆಝ್ (41), ಎರ್ನಾಕುಲಂನಲ್ಲಿರುವ ಕೊಟ್ಟಪುರಂ ಕ್ಯಾಥೊಲಿಕ್ ಡಯೊಸೀಸ್ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಂಗೀತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರಲ್ಲದೆ ಹಲವಾರು ಕ್ರೈಸ್ತ ಭಕ್ತಿ ಗೀತೆಗಳನ್ನೂ ರಚಿಸಿದ್ದರು. ಸಂತ್ರಸ್ತೆ ಬಾಲಕಿಗೆ ಕೂಡ ಸಂಗೀತದಲ್ಲಿ ಬಹಳಷ್ಟು ಆಸಕ್ತಿಯಿದ್ದ ಕಾರಣ ಆಕೆ ತನ್ನ ಬಳಿಯಲ್ಲಿ ಸಂಗೀತ ಕಲಿಯುವಂತೆ ಆಕೆಯನ್ನು ಪ್ರೇರೇಪಿಸುವಲ್ಲಿ ಆರೋಪಿ ಸಫಲರಾಗಿದ್ದರೆನ್ನಲಾಗಿದೆ. ಆದರೆ ಸಂಗೀತ ಕಲಿಸುವ ನೆಪದಲ್ಲಿ ಆತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನೆನ್ನಲಾಗಿದೆ.

ಈ ವರ್ಷದ ಜನವರಿಯಿಂದ ಮಾರ್ಚತನಕ ಆತ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದನೆಂದು ಆರೋಪಿಸಲಾಗಿದ್ದು ಈ ಬಗ್ಗೆ ಸಂತ್ರಸ್ತೆ ತನ್ನ ತಾಯಿಯ ಬಳಿ ಹೇಳಿಕೊಂಡ ನಂತರ ಎಪ್ರಿಲ್ ತಿಂಗಳಲ್ಲಿ ಪೊಲೀಸ್ ದೂರು ದಾಖಲಿಸಲಾಗಿತ್ತು. ಕೂಡಲೇ ಆರೋಪಿ ತಲೆಮರೆಸಿಕೊಂಡಿದ್ದರೂ ನಂತರ ಶರಣಾಗಿದ್ದು ಆತನಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ್ದ ಆತನ ಸಹೋದರನಿಗೂ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ನಡೆಸಿ ಆಕೆಯ ಮೇಲೆ ಅತ್ಯಾಚಾರವಾಗಿದೆಯೆಂದು ತಿಳಿಸದ ವೈದ್ಯೆಯ ಮೇಲೂ ಪ್ರಕರಣ ದಾಖಲಾಗಿದೆ.