ನನಗೂ ಒಳ್ಳೆಯ ರೀತಿಯಲ್ಲಿ ಬದುಕುವ ಹಕ್ಕಿಲ್ಲವೇ?

ಪ್ರ : ನಾನು ಬಡ ಕುಟುಂಬದಲ್ಲಿ ಜನಿಸಿದವಳು. ಅಪ್ಪ ಪೈಂಟರ್ ಕೆಲಸ ಮಾಡುತ್ತಾರೆ. ಅಮ್ಮನಿಗೆ ಮನೆಕೆಲಸ. ನಾವು ಮೂರು ಜನ ಹೆಣ್ಣುಮಕ್ಕಳು. ನನ್ನ ಅಕ್ಕ ತುಂಬಾ ಸಿಂಪಲ್. ಅವಳು ಹತ್ತನೇ ತರಗತಿಯವರೆಗೆ ಓದಿ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ತಂಗಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಳೆ. ನಾನು ಕಷ್ಟದಲ್ಲಿ ಡಿಗ್ರಿ ಮುಗಿಸಿ ಆಸ್ಪತ್ರೆ ಒಂದರಲ್ಲಿ ರಿಸೆಪ್ಷನಿಸ್ಟ್ ಕೆಲಸ ಮಾಡುತ್ತಿದ್ದೇನೆ. ನನಗೆ ಚಿಕ್ಕಂದಿನಿಂದಲೂ ಫ್ಯಾಷನ್ ಮಾಡುವ ಖಯಾಲಿ. ಚಿಕ್ಕವಳಿರುವಾಗ ಹಠ ಮಾಡಿ ಅಪ್ಪನ ಹತ್ತಿರ ಡ್ರೆಸ್ ತೆಗೆಸಿಕೊಳ್ಳುತ್ತಿದ್ದೆ. ನಮ್ಮ ಮೂವರಲ್ಲಿ ನೋಡಲೂ ನಾನೇ ಚೆನ್ನಾಗಿರುವುದು. ಈಗಂತೂ ನನಗೇ ಸಂಬಳ ಬರುವುದರಿಂದ ದುಡಿದ ಹೆಚ್ಚಿನ ಹಣವನ್ನು ನಾನು ಡ್ರೆಸ್ಸಿಗೇ ಹಾಕುತ್ತೇನೆ. ನನ್ನ ಆಸೆಯೆಲ್ಲ ನೋಡಿ ನನ್ನ ಅಮ್ಮ `ನೀನು ಅನುಕೂಲಸ್ಥರ ಕುಟುಂಬದಲ್ಲಿ ಹುಟ್ಟಬೇಕಿತ್ತು, ತಪ್ಪಿ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದೀ’ ಅಂತ ಆಗಾಗ ಹೇಳುತ್ತಿರುತ್ತಾಳೆ. ಅಪ್ಪ ನಾನು ಈ ರೀತಿ ಖರ್ಚು ಮಾಡುವುದು ನೋಡಿ ಸಿಟ್ಟಾಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನೆರೆಕೆರೆಯವರು `ಏನೂ ಇಲ್ಲದಿದ್ದರೂ ಇವಳ ಡೌಲು ನೋಡು’ ಅಂತ ಹೀಯಾಳಿಸಿ ಮಾತಾಡುತ್ತಾರೆ. ಆದರೆ ನಮ್ಮ ಹಾಸ್ಪಿಟಲ್ಲಿನಲ್ಲಿ ಎಲ್ಲರಿಗೂ ನಾನೆಂದರೆ ಅಚ್ಚುಮೆಚ್ಚು. ನನ್ನ ಡ್ರೆಸ್ಸಿಂಗ್ ಸ್ಟೈಲ್ ಎಲ್ಲರೂ ಇಷ್ಟಪಡುತ್ತಾರೆ. ಈಗ ನನ್ನ ಕಲೀಗ್ ಒಬ್ಬರು ನನ್ನನ್ನು ಇಷ್ಟಪಡುತ್ತಿದ್ದಾರೆ. ಕೂಡಲೇ ಮದುವೆಯಾಗಲೂ ರೆಡಿ ಇದ್ದಾರೆ. ಅವರ ಹತ್ತಿರ ಬೈಕ್ ಇದೆ. ಅವರ ಮನೆಯಲ್ಲಿ ಎಲ್ಲಾ ಅನುಕೂಲವೂ ಇದೆ. ನಮ್ಮ ಮನೆಯಲ್ಲಿ ಈ ವಿಷಯ ಹೇಳಿದ್ದಕ್ಕೆ `ಅಕ್ಕನ ಮದುವೆಯಾಗದೇ ನಿನಗೇನು ಅಷ್ಟು ಅರ್ಜೆಂಟ್?’ ಅಂತ ನನ್ನ ಆಸೆಗೆ ತಣ್ಣೀರು ಎರಚುತ್ತಿದ್ದಾರೆ. ಅಕ್ಕನನ್ನು ನೋಡಲು ಬಂದವರೆಲ್ಲ ವರದಕ್ಷಿಣೆ ಕೇಳುವುದರಿಂದ ಅವಳ ಮದುವೆ ನಿಂತಿದೆ. ಮದುವೆಯ ಖರ್ಚೂ ಭರಿಸಿ ಮದುವೆಯಾಗುತ್ತೇನೆ ಅಂತ ಮುಂದೆ ಬಂದ ಅವನನ್ನು ನಾನೀಗ ಮದುವೆಯಾದರೆ ತಪ್ಪೇನು? ಮನೆಯಲ್ಲಿ ಎಲ್ಲದಕ್ಕೂ ವಿರೋಧ. ನಾನು ದುಡಿದ ಹಣದಲ್ಲಿ ಫ್ಯಾಷನ್ ಮಾಡಿದರೂ ತಪ್ಪು, ನನ್ನ ಇಷ್ಟದ ಹುಡುಗನನ್ನು ಮದುವೆಯಾಗುತ್ತೇನೆ ಅಂದರೂ ತಪ್ಪು. ಮೊದಲಿನಿಂದಲೂ ನನ್ನ ಆಸೆಗೆ ಯಾವ ಬೆಲೆಯೂ ಇಲ್ಲ. ಜಗಳವಾಡಿಯೇ ಎಲ್ಲವನ್ನೂ ತೆಗೆದುಕೊಳ್ಳಬೇಕಾಗಿದೆ. ಅಪ್ಪ, ಅಮ್ಮನಿಗೆ ಅವರ ಮಾತು ಕೇಳುವುದಿಲ್ಲ ಅಂತ ನನ್ನ ಮೇಲೆ ಕೋಪ. ನಾನು ಚೆನ್ನಾಗಿದ್ದೇನೆ ಅಂತ ನನ್ನ ಅಕ್ಕ ಮತ್ತು ತಂಗಿಗೆ ನಾನೆಂದರೆ ಹೊಟ್ಟೆಕಿಚ್ಚು. ನನ್ನನ್ನು ಪ್ರೀತಿಸುವವರು ನಮ್ಮ ಮನೆಯಲ್ಲಿ ಯಾರೂ ಇಲ್ಲ. ಪ್ರೀತಿಸುವ ಹುಡುಗನನ್ನು ಮದುವೆಯಾಗಿ ನಾನು ಇಷ್ಟಪಡುವ ಬಾಳನ್ನು ಬದುಕುವ ಹಕ್ಕೂ ನನಗಿಲ್ಲವೇ?

: ಅಪ್ಪ, ಅಮ್ಮನಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಅಂದರೆ ನಾನು ನಂಬುವುದಿಲ್ಲ. ತಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ ಅಂತ ಸ್ವಲ್ಪ ಕೋಪ ಇರಬಹುದು ಅಷ್ಟೇ. ಅವರಿಗೆ ಎಲ್ಲ ಮಕ್ಕಳೂ ಒಂದೇ. ನೀವೊಬ್ಬರು ಒಳ್ಳೆಯ ಉಡುಪುಗಳನ್ನು ತೊಟ್ಟು ಉಳಿದ ಮಕ್ಕಳು ಏನೂ ಇಲ್ಲದರವರಂತೆ ಬದುಕುವುದನ್ನು ಸಹಿಸುವುದು ಅವರಿಗೆ ಕಷ್ಟವಾಗುತ್ತಿದೆ. ಎಲ್ಲರಂತೆ ಒಳ್ಳೆಯ ಬದುಕನ್ನು ಬಯಸುವುದು ತಪ್ಪಲ್ಲ. ಆದರೆ ನೀವು ಆ ಮನೆಯ ಮಗಳಾಗಿ ನಿಮಗೂ ಕೆಲವು ಬದ್ಧತೆಗಳಿವೆ. ಅದನ್ನೆಲ್ಲಾ ಮರೆತು ನಿಮ್ಮ ಸ್ವಾರ್ಥ ಮಾತ್ರ ನೋಡಿಕೊಂಡರೆ ನಿಮ್ಮ ಹೆತ್ತವರಿಗೆ ಅಸಮಾಧಾನವಾಗುವುದು ಸಹಜವೇ. ನಿಮ್ಮ ಅಕ್ಕ ದುಡಿಯುತ್ತಿದ್ದರೂ ಬಹುಶಃ ಮನೆ ಜವಾಬ್ದಾರಿಯಲ್ಲಿ ಅಪ್ಪನಿಗೆ ಸಹಾಯಕಳಾಗಿರಬಹುದು. ನೀವು ಕೊನೇ ಪಕ್ಷ ನಿಮ್ಮ ಸಹೋದರಿಯರಿಗೂ ನಿಮ್ಮಂತೆ ಡ್ರೆಸ್‍ಗಳನ್ನಾದರೂ ತಂದರೆ ನಿಮ್ಮ ಅಪ್ಪ, ಅಮ್ಮನಿಗೆ ಖುಶಿಯಾಗುವುದಿಲ್ಲವೇ? ನೀವು ಮೊದಲು ಮನೆಯವರಲ್ಲಿ ಒಂದಾಗಿ ಬಾಳುವುದನ್ನು ರೂಢಿಸಿಕೊಳ್ಳಿ. ಆಗ ಅವರಿಗೂ ನಿಮ್ಮ ಬಗ್ಗೆ ಆದರವಿರುತ್ತದೆ. ನಿಮ್ಮ ಪ್ರೀತಿಸುವವನಿಗೆ ಅಕ್ಕನ ಮದುವೆಯಾಗುವ ತನಕ ಕಾಯಲು ಹೇಳಿ. ಅವಳ ಮದುವೆಗೂ ನಿಮ್ಮ ಕೈಲಾದ ಸಹಾಯ ಮಾಡಿ. ಆಗ ನಿಮ್ಮ ಅಪ್ಪ, ಅಮ್ಮನೇ ಮುಂದೆ ನಿಂತು ನಿಮ್ಮ ಮದುವೆ ಮಾಡುತ್ತಾರೆ. ಯಾವಾಗಲೂ ಹಿರಿಯರ ಆಶೀರ್ವಾದ ಪಡೆದು ಮದುವೆಯಾದರೆ ಅದರಲ್ಲಿ ಸಿಗುವ ತೃಪ್ತಿ ಮನೆಯವರನ್ನು ಧಿಕ್ಕರಿಸಿ ಹೋಗಿ ಮದುವೆಯಾದರೆ ಸಿಗುವುದಿಲ್ಲ. ನೀವಿಷ್ಟ ಪಟ್ಟ ರೀತಿಯಲ್ಲಿ ನಿಮಗೆ ಬದುಕುವ ಹಕ್ಕಿದ್ದರೂ ಎಲ್ಲರೂ ಗೌರವಿಸುವ ರೀತಿಯಲ್ಲಿ ಬದುಕಿದರೇ ಅದಕ್ಕೊಂದು ಬೆಲೆ.