ವಾಹನವಿದೆಯೇ ? ಪೆಟ್ರೋಲ್ ಬೆಲೆ ಕುರಿತು ಗೊಣಗಾಡಬೇಡಿ

ತಿರುವನಂತಪುರಂ : ತೈಲ ಬೆಲೆ ಏರಿಕೆ ಸಮರ್ಥಿಸಿಕೊಂಡ ಕೇಂದ್ರ ಪ್ರವಾಸೋದ್ಯಮ ಸಚಿವ ಆಲ್ಫೋನ್ಸ್, ವಾಹನ ಇಟ್ಟುಕೊಳ್ಳಲು ಸಾಧ್ಯವಿರುವವರು ಏರಿಕೆ ಬೆಲೆ ಪಾವತಿಸಬೇಕು ಎಂದು ವಿವಾದಾಸ್ಪದ ಹೇಳಿಕೆ ನೀಡಿದರು.

ಕೇರಳದ ರಾಜಧಾನಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಡವರು ಯೋಗ್ಯ ಜೀವನ ನಡೆಸುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ತೆರಿಗೆ ಹೇರುತ್ತಿದೆ ಎಂದರು.

“ಪೆಟ್ರೋಲ್ ಯಾರು ಖರೀದಿಸುತ್ತಾರೆ ? ಕಾರು ಅಥವಾ ಬೈಕ್ ಇದ್ದವರಿಗೆ ಇಂಧನದ ಅಗತ್ಯವಿದೆ. ವಾಸ್ತವದಲ್ಲಿ ಅವರೇನೂ ಹಸಿದಿರುವುದಿಲ್ಲ. ಶ್ರೀಮಂತರು ಏರಿಕೆ ಬೆಲೆ ಪಾವತಿಸಲಿ” ಎಂದ ಆಲ್ಫೋನ್ಸ್, “ತೈಲ ಬೆಲೆ ಏರಿದಾಗಲೆಲ್ಲ ಜನ ಟೀಕಿಸುತ್ತಾರೆ. ಆದರೆ ಇದರಿಂದ ದೇಶಕ್ಕೆ ಲಾಭವಿದೆ ಎಂಬುದನ್ನು ತಿಳಿದುಕೊಳ್ಳಬೇಕು” ಎಂದರು.

ಮೊಯ್ಲಿ ಖಂಡನೆ“ಅಧಿಕಾರಿಗಳು ರಾಜಕೀಯ ಪ್ರವೇಶಿಸಿದರೆ, ಅವರಿಗೆ ಜನರ ಸಮಸ್ಯೆಗಳು ಅರ್ಥವಾಗುವುದಿಲ್ಲ. ಮೋದಿ ಸಂಪುಟದ ಹಲವು ಸಚಿವರು ಇದೇ ಕೆಟಗರಿಯವರಾಗಿದ್ದಾರೆ” ಎಂದು ಮಾಜಿ ಸಚಿವ ವೀರಪ್ಪ ಮೊಯ್ಲಿ, ಆಲ್ಫೋನ್ಸ್ ಹೇಳಿಕೆ ಖಂಡಿಸಿದರು.

“ಆಲ್ಫೋನ್ಸ್ ಹೇಳಿಕೆ ಆಘಾತಕಾರಿ. ಕಚ್ಚಾ ತೈಲದ ಬೆಲೆ ಗಣನೀಯ ಇಳಿಕೆಯಾಗಿದ್ದರೂ ಸರ್ಕಾರ ಮಾತ್ರ ತೆರಿಗೆ ಹೇರುತ್ತಲೇ ಜನರನ್ನು ನುಣ್ಣಗೆ ಬೋಳಿಸುತ್ತಿದೆ” ಎಂದು ತೆಲಂಗಾಣ ರಾಷ್ಟ್ರ ಸಮಿತಿ ವಕ್ತಾರ ಭಾನುಪ್ರಸಾದ್ ಟೀಕಿಸಿದರು. “ಬಡವರಿಗೆ ನೆರವಾಗಲು ನಾವು ತೆರಿಗೆ ಸಂಗ್ರಹಿಸುತ್ತಿದ್ದೇವೆ. ಹಣ ಸಂಗ್ರಹಣೆಗಾಗಿ ಕೇಂದ್ರ ಸಚಿವರು ಕೊಳ್ಳೆ ಹೊಡೆಯುವುದಿಲ್ಲ. ಹಿಂದಿನ ಯುಪಿಎ ಸರ್ಕಾರದಲ್ಲಿ ಆ ಕೆಲಸ ನಡೆದಿತ್ತು” ಎಂದು ಆಲ್ಫೋನ್ಸ್ ಹೇಳಿದರು.