ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದನ್ನು ಮರೆಯಬೇಡಿ : ಯಡ್ಡಿಗೆ ಈಶ್ವರಪ್ಪ ಕಟಕಿ

`ಮಾಜಿ ಸೀಎಂ ನಾಯಕತ್ವದಲ್ಲಿ ಪಕ್ಷದ ಭವಿಷ್ಯ ಆತಂಕದಲ್ಲಿದೆ’

ಬೆಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷ ಯಡ್ಡಿಯೂರಪ್ಪ ತನ್ನ ಹಠಮಾರಿ ಧೋರಣೆಯನ್ನು ಮುಂದುವರಿಸಿ ಕೆಲವೇ ಕೆಲವು ನಾಯಕರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳುವ ತನ್ನ ಈಗಿನ ನೀತಿಯನ್ನು ಮುಂದುವರಿಸಿದ್ದೇ ಆದಲ್ಲಿ ರಾಜ್ಯದಲ್ಲಿ ಅವರ ನಾಯಕತ್ವದಲ್ಲಿ ಬಿಜೆಪಿಯ ಭವಿಷ್ಯ ಡೋಲಾಯಮಾನವಾಗಲಿದೆ ಎಂದು ಹಿರಿಯ ನಾಯಕ  ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ತುಮಕೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಜನರು ಯಡ್ಡಿಯೂರಪ್ಪ ಹಾಗೂ ನನ್ನಂಥವರ ಮುಖವನ್ನು ನೋಡಿ ಮತ ಹಾಕುವುದಿಲ್ಲ, ಬದಲಾಗಿ ಪಕ್ಷಕ್ಕೆ ಮತ ಹಾಕುತ್ತಾರೆಂಬುದನ್ನು ಅವರು ತಿಳಿದುಕೊಂಡಿರಬೇಕು. ಯಡ್ಡಿಯೂರಪ್ಪ ಪಕ್ಷದ ಮುಖವಾಗಲು ಸಾಧ್ಯವಿಲ್ಲ. ಅವರೊಬ್ಬರೇ ಪಕ್ಷಕ್ಕೆ ಮತಗಳನ್ನು ಗಳಿಸಲು ಸಾಧ್ಯವಿಲ್ಲ. ಎಲ್ಲರ ಸಾಮೂಹಿಕ ಯತ್ನಗಳಿಂದ ಮಾತ್ರ ಪಕ್ಷ ಅಧಿಕಾರಕ್ಕೆ ಬರಬಹುದು.  ವ್ಯಕ್ತಿಗಿಂತ ಪಕ್ಷ ದೊಡ್ಡದು” ಎಂದು ಯಡ್ಡಿಯೂರಪ್ಪ ವಿರುದ್ಧ ಕೆಂಡ ಕಾರಿದರು.

ಪಕ್ಷದ ಮೇಲಿನ ನಿಷ್ಠೆ ಎಲ್ಲದಕ್ಕಿಂತಲೂ ಮಿಗಿಲು ಎಂದೂ ಹೇಳಿದ ಈಶ್ವರಪ್ಪ, “ಅವರು ಒಮ್ಮೆ ಬಿಜೆಪಿ ತೊರೆದು ಕೆಜೆಪಿ ರಚಿಸಿ ನಂತರ ಸೋತು  ಪಕ್ಷಕ್ಕೆ ಮತ್ತೆ ಓಡಿ ಬಂದಾಗಲೂ ಯಾರೂ ವಿರೋಧಿಸಲಿಲ್ಲ. ಕೆಲವೇ ಕೆಲವು ನಾಯಕರ ಜತೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳುವ ತಮ್ಮ ಅಭ್ಯಾಸವನ್ನು ಯಡ್ಡಿಯೂರಪ್ಪ ಇನ್ನೂ ಬಿಟ್ಟಿಲ್ಲ” ಎಂದರು.

“ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಅದಕ್ಕೆ ದ್ರೋಹಗೈಯ್ಯುವ ಬಗ್ಗೆ ನನಗೆ ಯೋಚಿಸಲೂ ಸಾಧ್ಯವಿಲ್ಲ” ಎಂದು ಈಶ್ವರಪ್ಪ ಹೇಳಿದರು.

ಈಶ್ವರಪ್ಪ  ಹೇಳಿಕೆಗೆ ಯಡ್ಡಿಯೂರಪ್ಪ ಪ್ರತಿಕ್ರಿಯಿಸಲು ನಿರಾಕರಿಸಿದರೂ ಅವರ ಕಟ್ಟಾ ಬೆಂಬಲಿಗ ಆಯನೂರು ಮಂಜುನಾಥ್  ಮಾತ್ರ ತೀವ್ರ ಆಕ್ಷೇಪÀ ವ್ಯಕ್ತಡಿಸಿದ್ದಾರೆ.

“ಯಡ್ಡಿಯೂರಪ್ಪ ಅವರಿಗೆ ಮತಗಳನ್ನು ಸೆಳೆಯುವ ಸಾಮಥ್ರ್ಯವಿಲ್ಲದೇ ಇದ್ದಲ್ಲಿ  ಅವರನ್ನು ರಾಜ್ಯ ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಪ್ಪು ಮಾಡಿದ್ದಾರೆಂದೇ ಹೇಳಬೇಕಾಗುತ್ತದೆ” ಎಂದು  ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ. “ಪಕ್ಷದ ರಾಜ್ಯ ನಾಯಕರೊಬ್ಬರ ಮೇಲೆ ದೋಷಾರೋಪಣೆ ಮುಂದುವರಿದಿದ್ದೇ ಆದಲ್ಲಿ ಜನರು ಪಕ್ಷಕ್ಕೆ ಮತವನ್ನೇ ಹಾಕಲು ಮನಸ್ಸು ಮಾಡಲಿಕ್ಕಿಲ್ಲ” ಎಂದೂ ಅವರು ಎಚ್ಚರಿಸಿದ್ದಾರೆ.