`ಸರ್ವಾಧಿಕಾರ ಬಿಡಿ, ಕಾಂಗ್ರೆಸ್ ಕೊಲ್ಲಬೇಡಿ’ ವೈದ್ಯಕೀಯ ಕಾಯ್ದೆ ವಿರುದ್ಧ ಪೂಜಾರಿ ಗರಂ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಮತ್ತು ಕ್ಲಿನಿಕ್ಕುಗಳಿಗೆ ಮಾರಕವಾಗಿರುವ ಮಸೂದೆಯೊಂದನ್ನು ಏಕಾಏಕಿಯಾಗಿ ಜಾರಿಗೆ ತಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮತ್ತೆ ಝಾಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸರಕಾರ ಇಂತಹ ಕರಾಳ ಮಸೂದೆಯನ್ನು ತರುವ ಮುನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅಭಿಪ್ರಾಯವನ್ನು ಕೇಳಿದ್ದೀರಾ. ಅಥವಾ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಏನಾದರೂ ಪ್ರಸ್ತಾಪಿಸಿದ್ದೀರಾ. ಹೈಕಮಾಂಡಿನಿಂದ ನೀವೇನಾದರೂ ಒಪ್ಪಿಗೆ ಪಡೆದುಕೊಂಡಿದ್ದೀರಾ. ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು. ನೀವೇನು ಸರ್ವಾಧಿಕಾರಿಗಳಾ” ಎಂದು ಪೂಜಾರಿ ಪ್ರಶ್ನಿಸಿದರು.

“ಮೊನ್ನೆ ವೈದ್ಯರು ನಡೆಸಿದ ಮುಷ್ಕರದಿಂದ ಅದೆಷ್ಟು ಮಂದಿ ಅಮಾಯಕ ರೋಗಿಗಳು ಕಷ್ಟಕ್ಕೀಡಾದರು ಎನ್ನುವ ಅರಿವು ನಿಮಗಿದೆಯೇ, ಬಡ ಜನರ ಬಗ್ಗೆ ನಿಮಗೆ ಚೂರಾದರೂ ಕಾಳಜಿ ಅನ್ನೋದೇ ಇಲ್ಲವೇ, ಕಾಯ್ದೆ ಜಾರಿಗೆ ತರುವ ಮುನ್ನ ಯಾರಲ್ಲಾದರೂ ಈ ಬಗ್ಗೆ ಚರ್ಚಿಸಿದ್ದೀರಾ” ಎಂದು ಪ್ರಶ್ನಿಸಿದರು.

ಜನಸಾಮಾನ್ಯರು ಈಗಾಗಲೇ ನಿತ್ಯ ಮುಷ್ಕರಿಂದ ರೋಸಿ ಹೋಗಿದ್ದಾರೆ. ಕಾಲ ಮಿಂಚಿ ಹೋಗಿಲ್ಲ. ಅಹಂಕಾರ ಪಡಬೇಡಿ. ದಯಮಾಡಿ ಕಾಂಗ್ರೆಸ್ಸನ್ನು ಕೊಲ್ಲಬೇಡಿ. ನಿಮಗೆ ಆಡಳಿತ ನಡೆಸಲಾಗದಿದ್ದರೆ ಅಧಿಕಾರ ಬಿಟ್ಟುಕೊಡಿ. ಪಕ್ಷವನ್ನು ಸಂಘಟಿಸಲು ಕಾರ್ಯಕರ್ತರು ಶಕ್ತಿ ಮೀರಿ ದುಡಿಯುತ್ತಿದ್ದಾರೆ. ನಿಮ್ಮದೇ ತಪ್ಪು ನಿರ್ಧಾರಗಳಿಂದ ಪಕ್ಷವನ್ನು ಹಾಳುಮಾಡಬೇಡಿರಿ” ಎಂದು ಜನಾರ್ದನ ಪೂಜಾರಿ ಸೀಎಂ ಸಿದ್ದರಾಮಯ್ಯರಲ್ಲಿ ಮನವಿ ಮಾಡಿಕೊಂಡರು.