ದಾನಿಗಳಿಂದ ಕೆರಂಕಿ ಶಾಲೆಗೆ ಮರುಚೇತನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಂಟ್ವಾಳ ತಾಲೂಕಿನ ಕೆರಂಕಿಯಲ್ಲಿ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯೊಂದನ್ನು ಉಳಿಸಲೋಸುಗ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸುಮಾರು 1.60 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದೆ.

40 ವರ್ಷ ಹಳೆಯದಾದ ಶಾಲೆಯ ಶಿಥಿಲ ಕಟ್ಟಡ ಪುನರುಜ್ಜೀವಕ್ಕೆ ಬಟ್ಟೆ ವ್ಯಾಪಾರಿ ಪ್ರಕಾಶ್ ಅಂಚನ್ ಶತಾಯಗತಾಯ ಪ್ರಯತ್ನಿಸಿರುವುದಲ್ಲದೆ, ದಾನಿಗಳ ನೆರವು ಪಡೆದು 14 ತರಗತಿಗಳಿರುವ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಈ ಕಟ್ಟಡ ಶನಿವಾರ ಉದ್ಘಾಟನೆಗೊಳ್ಳಲಿದೆ.

“ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ವಿಭಿನ್ನ ಕಾರಣಗಳಿಂದ ಮುಚ್ಚಲ್ಪಡುತ್ತಿವೆ. ಆದರೆ ಇದಕ್ಕೊಂದು ಅಪವಾದ ಈ ಶಾಲೆಯಾಗಿದೆ. ಒಂದು ವರ್ಷದ ಹಿಂದೆ ಈ ಶಾಲೆ ಉಳಿಸಲು ಪ್ರಯತ್ನ ಮುಂದುವರಿಸಿದ್ದು, ಶಾಲೆಯಲ್ಲಿ ಆಗ ಬರೇ 23 ವಿದ್ಯಾರ್ಥಿಗಳಿದ್ದರು. ಈಗ ಈ ಸಂಖ್ಯೆ 500ರ ಗಡಿ ದಾಟಿದೆ. ಅಚ್ಚರಿಯೆಂದರೆ, ಹತ್ತಿರದಲ್ಲಿರುವ ಇಂಗ್ಲಿಷ್ ಮಾಧ್ಯಮ ಶಾಲೆಗೆ ಪ್ರವೇಶ ಪಡೆದುಕೊಂಡಿರುವ ವಿದ್ಯಾರ್ಥಿಗಳಲ್ಲಿ ಕೆಲವರು ಇಲ್ಲಿ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ” ಎಂದು ಪ್ರಕಾಶ್ ವಿವರಿಸಿದರು.

“ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಣವೇ ಶ್ರೇಷ್ಠ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ ನಾವಿಲ್ಲಿ ಮೂಲ ಸೌಕರ್ಯಗಳೊಂದಿಗೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ” ಎಂದರು.

ಮುಚ್ಚುವ ಹಂತದಲ್ಲಿರುವ ಶಾಲೆಯನ್ನು ಸ್ಥಳೀಯರ ಸಹಕಾರದಿಂದ ಉಳಿಸಬಹುದದೆಂಬುದನ್ನು ನಾಲ್ಕು ರಾಜ್ಯಗಳಲ್ಲಿ ಕ್ಲಬ್ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದ್ದು, ಅದನ್ನಿಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ ಎಂದವರು ತಿಳಿಸಿದರು.