ಮಗನಿಗೆ ಇಷು ್ಟ ಬೇಗ ಗರ್ಲ್ಫ್ರೆಂಡಾ?

 

ಪ್ರ : ನನ್ನ ಮಗ ಈ ವರ್ಷ ಪಿಯುಸಿ ಮುಗಿಸಿ ಡಿಗ್ರಿ ಕಾಲೇಜಿಗೆ ಸೇರಿದ್ದಾನೆ. ಅವನಿಗಿನ್ನೂ ಹದಿನೆಂಟೂ ತುಂಬಿಲ್ಲ. ಪಿಯುಸಿಯವರೆಗೆ ಅವನಿಗೆ ಓದುವುದೆಂದರೆ ಆಗುತ್ತಿರಲಿಲ್ಲ. ಪೋಲಿ ಅಲೆಯುತ್ತಾ ಬೀದಿ ಹುಡುಗರ ಜೊತೆ ಕ್ರಿಕೆಟ್ ಆಡುತ್ತಾ ಹೇಗೋ ಪರೀಕ್ಷೆಯಲ್ಲಿ ಪಾಸಾದ. ಹೇಳಿದ ಮಾತು ಕೇಳುತ್ತಿರಲಿಲ್ಲ. ಅವನ ಬೆವರಿನಿಂದ ಕೂಡಿದ ಹೊಲಸಾದ ಡ್ರೆಸ್ಸನ್ನು ತೊಳೆಯುವುದೇ ನನಗೆ ದೊಡ್ಡ ಸಮಸ್ಯೆಯಾಗುತ್ತಿತ್ತು. ಅಂತಹ ಕಿಲಾಡಿ ಹುಡುಗ ಈಗ ಕೆಲವು ಸಮಯದಿಂದ ಗಂಭೀರವಾಗುತ್ತಿದ್ದಾನೆ. ಮೊದಲೆಲ್ಲ ಯಾವುದೋ ಶರ್ಟ್ ತೊಟ್ಟು ಹೋಗುತ್ತಿದ್ದವನೀಗ ಡ್ರೆಸ್ ಬಗ್ಗೆ ಆಸಕ್ತಿ ವಹಿಸುತ್ತಿದ್ದಾನೆ.  ಆಗಾಗ ಕಾಲೇಜಿಗೆ ಬಂಕ್ ಮಾಡುತ್ತಿದ್ದವನು ಈಗ ಕಾಲೇಜಿಗೆ ಹೋಗಲು ಹುಮ್ಮಸ್ಸು ತೋರಿಸುತ್ತಿದ್ದಾನೆ. ಅಷ್ಟೇ ಆಗಿದ್ದರೆ ನಾನು ಸಂತೋಷ ಪಡುತ್ತಿದ್ದೆ. ಆದರೆ ಈಗ ಯಾವಾಗ ನೋಡಿದರೂ ಸೆಲ್‍ಫೋನಿನಲ್ಲಿ ಮೆಸೇಜ್ ಮಾಡುತ್ತಿರುತ್ತಾನೆ. ರೂಮಿನ ಬಾಗಿಲು ಹಾಕಿಕೊಂಡು ಮೊಬೈಲಿನಲ್ಲಿ ಮಾತಾಡುತ್ತಿರುತ್ತಾನೆ. ಕಳೆದ ವಾರ ಅವನ ಗೆಳೆಯ ಬಂದಿದ್ದ. ಇವನು ಅವನ ಹತ್ತಿರ ಯಾವುದೋ ಹುಡುಗಿಯ ಬಗ್ಗೆ ಮಾತಾಡುವುದು ಮರೆಯಲ್ಲಿ ನಿಂತು ಕೇಳಿದೆ. ಅವರ ಮಾತಿನಿಂದ ಗೊತ್ತಾಗಿದ್ದೆಂದರೆ ನನ್ನ ಮಗನಿಗೆ ಒಬ್ಬಳು ಗರ್ಲ್‍ಫ್ರೆಂಡ್ ಇದ್ದಾಳೆ ಅಂತ. ಅವಳ ಜೊತೆಯೇ ಇವನು ಇಡೀ ಹೊತ್ತೂ ಸಂಪರ್ಕದಲ್ಲಿರುವುದು ಅಂತ ಈಗ ಗೊತ್ತಾಯಿತು. ಇನ್ನೂ ಅವನು ಮೇಜರ್ ಕೂಡಾ ಆಗಿಲ್ಲ. ಈಗಲೇ ಯಾವುದೋ ಹುಡುಗಿಯನ್ನು ಅಷ್ಟು ಹಚ್ಚಿಕೊಂಡಿದ್ದಾನೆ ಅನ್ನುವುದೇ ನನ್ನ ತಲೆಬಿಸಿಗೆ ಕಾರಣವಾಗಿದೆ. ನಮ್ಮದು ಜಾತಿಗೆ ತುಂಬಾ ಮಹತ್ವ ಕೊಡುವ ಕುಟುಂಬ. ಆ ಹುಡುಗಿ ಯಾವ ಜನವೋ ಏನೋ. ಅವಳನ್ನು ಹಿಂದೆಮುಂದೆ ನೋಡದೇ ಪ್ರೀತಿಸಿ ಮದುವೆಯಾಗಿಬಿಟ್ಟರೆ ಗತಿಯೇನು? ಅದೂ ಅಲ್ಲದೇ ನಮಗಿರುವವನು ಅವನೊಬ್ಬನೇ ಮಗ. ಅವನು ಓದಿ ವಿದ್ಯಾವಂತನಾಗಲಿ ಅನ್ನುವ ಕನಸು ನಮ್ಮದು. ಹುಡುಗಿಯ ಹಿಂದೆ ಬಿದ್ದು ಓದು ನಿರ್ಲಕ್ಷಿಸಿದರೆ ಅನ್ನುವ ಆತಂಕ. ನಾನೀಗ ಹೇಗೆ ಅವನನ್ನು ಆ ಹುಡುಗಿಯ ಮೋಹದಿಂದ ಬಿಡಿಸಲಿ?

: ನೀವು ಅಗತ್ಯಕ್ಕಿಂತ ಹೆಚ್ಚು ತಲೆಬಿಸಿ ಮಾಡಿಕೊಳ್ಳುತ್ತಿದ್ದೀರಿ ಅಂತಲೇ ಅನಿಸುತ್ತಿದೆ. ನಿಮ್ಮ ಮಗನಿಗೆ ಈಗ ತಾನೇ ಮೀಸೆ ಚಿಗುರುತ್ತಿದೆ. ಪ್ರಾಯವೂ ಬರುತ್ತಿದೆ. ಪ್ರಾಯಕ್ಕೆ ಸರಿಯಾಗಿ ಬೇರೆ ಲಿಂಗಿಯ ಮೇಲೆ ಆಕರ್ಷಣೆಯೂ ಮೂಡುತ್ತಿದೆ. ಅದೆಲ್ಲ ಈ ವಯಸ್ಸಿನಲ್ಲಿ ಸಾಮಾನ್ಯ. ಹಾಗಿರದಿದ್ದರೇ ಹುಡುಗರಲ್ಲಿ ಏನೋ ಕೊರತೆಯಿದೆ ಅಂತ ಭಾವಿಸಬೇಕು. ಅದೂ ಅಲ್ಲದೇ ಈಗಿನ ಮುಕ್ತ ವಾತಾವರಣದಲ್ಲಿ ಹುಡುಗ-ಹುಡುಗಿ ಅಂತ ಬೇಧವಿಲ್ಲದೇ ಸ್ನೇಹವೂ ಬೆಳೆಯಬಹುದು. ತಮ್ಮ ಮನಸ್ಸಿಗೆ ಹತ್ತಿರವಾದವರ ಜೊತೆ ಆತ್ಮೀಯತೆ ತನ್ನಿಂದ ತಾನೇ ಮೂಡುತ್ತದೆ. ಆದರೆ ಅದನ್ನೇ ಪ್ರೀತಿ-ಪ್ರೇಮ ಅಂತ ಹೇಳಲೂ ಬರುವುದಿಲ್ಲ. ಕಾಲೇಜು ಮುಗಿದ ತಕ್ಷಣ ಇವನೆಲ್ಲೋ, ಅವಳೆಲ್ಲೋ ಆಗಲೂಬಹುದು. ಆದರೆ ಕೆಲವೊಮ್ಮೆ ಈ ಸ್ನೇಹವೇ ಪ್ರೀತಿಯಾಗಿ ಪರಿವರ್ತನೆಗೊಂಡು ಮದುವೆಯವರೆಗೂ ಹೋಗ ಬಹುದು. ಹಾಗಂತ ಅವಳ ಸ್ನೇಹವನ್ನೇ ಕಡಿದುಕೊಳ್ಳಲು ಹೇಳುವುದೂ ಸರಿಯಲ್ಲ. ಅವಳ ಸ್ನೇಹದಿಂದ ನಿಮ್ಮ ಮಗನಲ್ಲಿ ಶಿಸ್ತು ಮೂಡುತ್ತಿದೆ. ಓದಿನಲ್ಲಿ ಆಸಕ್ತಿಯೂ ಬರುತ್ತಿದೆ. ಆ ಹುಡುಗಿಯನ್ನು ಇಂಪ್ರೆಸ್ ಮಾಡಲಿಕ್ಕಾದರೂ ನಿಮ್ಮ ಮಗ ಓದಿನಲ್ಲಿ ಮುಂದೆ ಬರಲೂಬಹುದು. ಆದರೆ ತಾಯಿಯಾದ ನಿಮಗೆ ಆತಂಕ ಇರುವುದು ಸಹಜ. ಹೆಚ್ಚು ಇಮೋಶನಲ್ ಅಟ್ಯಾಚ್‍ಮೆಂಟ್ ಬೆಳೆಸಿಕೊಳ್ಳದೇ ಸ್ನೇಹಿತರಾಗಿ ಮಾತ್ರ ಇರಿ ಅನ್ನುವ ಉಪದೇಶ ಕೊಡಬಹುದು. ಈಗಲೇ ಜಾಸ್ತಿ ಮೋಹ ಬೆಳೆಸಿಕೊಂಡರೆ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಬಹುದು ಅಂತಲೂ ಅವನಿಗೆ ಕಿವಿಮಾತು ಹೇಳಿ. ಪ್ರತಿಯೊಬ್ಬರಿಗೂ ಅವರ ಬದುಕು ರೂಪಿಸಿಕೊಳ್ಳುವ ಹಕ್ಕು ಇದೆಯಲ್ಲವೇ? ನೀವು ತೋರಿಸುವ ಪ್ರೀತಿ, ನೀವು ಕೊಟ್ಟ ಸಂಸ್ಕಾರದಿಂದಾಗಿ ಅಷ್ಟು ಸುಲಭದಲ್ಲಿ ಮಕ್ಕಳು ನಿಮ್ಮ ವಿರುದ್ಧ ಹೋಗಲಾರರು. ಮಕ್ಕಳ ಮೇಲೆ ನಿಗಾ ಇಡುವುದರ ಜೊತೆಗೆ ನಂಬಿಗೆ ಇಡಲೇಬೇಕಲ್ಲವೇ?