ಅವಳಿಗೂ ಸೆಕ್ಸ್ ಬಗ್ಗೆ ವೀಕ್ನೆಸ್ ಇರಬಹುದೇ ?ಚೇತನ

ಪ್ರ : ನನಗೀಗ 35 ವರ್ಷ. ಮದುವೆಯಾಗಿ ಒಂದು ಮಗುವಿದೆ. ತಿಂಗಳಲ್ಲಿ ಹದಿನೈದು-ಇಪ್ಪತ್ತು ದಿನ ಊರ ಹೊರಗೇ ಇರುವ ಕೆಲಸ ನನ್ನದು. ನನಗೆ ಹೆಂಡತಿ, ಮಗುವಿನ ಬಗ್ಗೆ ಪ್ರೀತಿ ಇದೆ. ಆದರೆ ನನಗೆ ಸೆಕ್ಸ್ ಬಗ್ಗೆ ಸ್ವಲ್ಪ ವೀಕ್‍ನೆಸ್. ಊರಿನಲ್ಲಿದ್ದಾಗ ಹೆಂಡತಿಗೆ ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಅವಳನ್ನು ಒತ್ತಾಯಿಸಿಯಾದರೂ ನನಗೆ ಬೇಕಾದ್ದು ಪಡೆಯುತ್ತೇನೆ. ಆದರೆ ಹೊರಊರಿಗೆ ಹೋದಾಗಲೂ ನನಗೆ `ಅದು’ ಇಲ್ಲದಿದ್ದರೆ ನಿದ್ದೆಯೇ ಬರುವುದಿಲ್ಲ. ಅದಕ್ಕಾಗಿ ನಾನು ಹೋಗುವ ಊರಿನಲ್ಲೆಲ್ಲ ಅದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಇಲ್ಲಿಯೂ ನಾನು ಕರೆದಾಗ ಬರುವ ಗೆಳತಿಯರಿದ್ದಾರೆ. ಕೈತುಂಬಾ ಸಂಬಳವೂ ಬರುವುದರಿಂದ ಎಲ್ಲವನ್ನೂ ಅನುಭವಿಸಿಕೊಂಡು ಹಾಯಾಗಿದ್ದೇನೆ. ಒಂದೆರಡು ಬಾರಿ ಹೆಂಡತಿಗೆ ನನ್ನ ಬಗ್ಗೆ ಸಂಶಯ ಬಂದಿದ್ದರೂ ಅವಳನ್ನು ಲಲ್ಲೆಗರೆದು ಹೇಗೋ ಅಂತದ್ದೇನಿಲ್ಲ ಅನ್ನುವ ನಂಬಿಕೆ ಹುಟ್ಟಿಸಿದ್ದೆ. ಆದರೆ ಇತ್ತೀಚೆಗೆ ನನ್ನ ಹೆಂಡತಿಯ ಗುಣಸ್ವಭಾವದಲ್ಲಿ ತುಂಬಾ ವ್ಯತ್ಯಾಸ ಕಾಣುತ್ತಿದ್ದೇನೆ. ಮೊದಲೆಲ್ಲ ಅವಳಿಗೆ ಸೆಕ್ಸ್ ಅಂದರೆ ಅಲರ್ಜಿಯಾಗಿತ್ತು. ಬೇಕೋ ಬೇಡವೋ ಅನ್ನುವಂತೆ ನನ್ನ ಜೊತೆ ಸಹಕರಿಸುತ್ತಿದ್ದಳು. ಆದರೆ ಇತ್ತೀಚೆಗೆ ಅವಳೇ ಅದನ್ನು ಬಯಸುತ್ತಾ ಇದ್ದಾಳೆ. ನನಗೇ ಮೂಡ್ ಇಲ್ಲದಿದ್ದರೂ ಒಂದಾಗಲು ಪ್ರಯತ್ನಿಸುತ್ತಾಳೆ. ಅವಳ ಸೆಲ್ ಫೋನ್ ಸಹ ಅನೇಕ ಬಾರಿ ಎಂಗೇಜ್ ಬರುತ್ತಿರುತ್ತದೆ. ಮೊಬೈಲನ್ನು ಬಾತ್‍ರೂಮಿಗೆ ಹೋಗುವಾಗಲೂ ಜೊತೆಗೊಯ್ಯುತ್ತಾಳೆ. ಕೋಡ್ ನಂಬರ್ ಬೇರೆ ಹಾಕಿಕೊಂಡಿದ್ದಾಳೆ. ಮಗುವನ್ನು ಕೆಲಸದವಳ ಹತ್ತಿರ ಬಿಟ್ಟು ಏನೋ ನೆವ ಹೇಳಿ ಆಗಾಗ ಹೊರಗೆ ಹೋಗುತ್ತಿರುತ್ತಾಳೆ. ಅವಳೂ ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿರಬಹುದೇ ಅನ್ನುವ ಸಂಶಯ ಕಾಡುತ್ತಿದೆ. ನಾನೂ ಹೊರಗಡೆ ಹೋಗುತ್ತಿರುವುದರಿಂದ ಅವಳ ಮೇಲೆ ನಿಗಾ ಇಡಲೂ ಕಷ್ಟವಾಗಿದೆ. ನನ್ನ ಅನುಮಾನ ನಿಜವಿರಬಹುದೇ? 

: ತಾನು ಕಳ್ಳ, ಪರರ ನಂಬ ಅನ್ನುವಂತಾಗಿದೆ ನಿಮ್ಮ ಸ್ಥಿತಿ. ನೀವಂತೂ ಪ್ರಾಮಾಣಿಕರಲ್ಲ, ಈಗ ಹೆಂಡತಿಯ ಶೀಲದ ಬಗ್ಗೆ ಶಂಕೆ. ನಿಮಗೆ ಅವಳನ್ನು ಸಂಶಯಿಸುವ ಅರ್ಹತೆಯಾದರೂ ಇದೆಯಾ? ಹೆಂಡತಿಗೆ ಮೋಸ ಮಾಡಿ ನಿಮಗೆ ಬೇಕೆಂದವರ ಜೊತೆ ಚಕ್ಕಂದವಾಡುವ ನೀವು ಹೆಂಡತಿ ಮಾತ್ರ ಸತಿಸಾವಿತ್ರಿಯಾಗಿರಬೇಕೆಂದು ಬಯಸುವುದು ಎಷ್ಟರಮಟ್ಟಿಗೆ ಸರಿ? ಆದರೂ ನನಗನಿಸುತ್ತಿದೆ ಅವಳು ನಿಮಗೆ ಪಾಠ ಕಲಿಸಲು ಈ ರೀತಿ ವರ್ತಿಸುತ್ತಿದ್ದಾಳೆ ಅಂತ. ನಿಮ್ಮ ಗಮನ ಅವಳ ಮೇಲೆ ಹೋಗಿ ಆಗಲಾದರೂ ನೀವು ನಿಮ್ಮ ಕೆಟ್ಟ ಚಾಳಿ ಬಿಡಲಿ ಅನ್ನುವ ಉದ್ದೇಶದಿಂದ ಆ ರೀತಿ ಮಾಡುತ್ತಿರಬಹುದೇನೋ. ತನ್ನಲ್ಲಿ ತೃಪ್ತಿ ಹೊಂದದೇ  ಬೇರೆಯವರನ್ನು ಹುಡುಕಿಕೊಂಡು ಹೋಗುತ್ತಿರಬಹುದೇ ಎನ್ನುವ ಅನುಮಾನದಿಂದ ಈಗ ಅವಳು ಅತಿಯಗಿ ಸೆಕ್ಸ್ ಬಗ್ಗೆ ಆಸಕ್ತಿ ತೋರಿಸುತ್ತಿರಬಹುದು. ನಿಮ್ಮ ಬಗ್ಗೆ ಅವಳಲ್ಲಿ ಕಾಡುವ ಅಸುರಕ್ಷತೆಯ ಭಾವನೆಯೇ ಅವಳು ಆ ರೀತಿ ನಡೆದುಕೊಳ್ಳವಂತೆ ಪ್ರೇರೇಪಿಸಿರಬಹುದು. ಒಂದು ಮಗುವಿನ ತಾಯಿಯೂ ಆಗಿರುವ ಅವಳು ಅಷ್ಟು ಬೇಗ ದಾರಿ ತಪ್ಪಿ ಹೋಗಲಾರಳು. ಆದರೂ ನಿಮ್ಮ ಟೊಳ್ಳು ಪ್ರೀತಿಯಿಂದ ಬೇಸತ್ತು ಬೇರೆಯವರಲ್ಲಿ ಅದನ್ನು ಅರಸುವ ಆಲೋಚನೆ ಬರುವುದಿಲ್ಲ ಅಂತ ನೂರಕ್ಕೆ ನೂರು ಹೇಳಲೂ ಸಾಧ್ಯವಿಲ್ಲ. ಗಂಡ ತಪ್ಪು ಮಾಡುತ್ತಾನೆ ಅಂತ ಹೆಂಡತಿಯೂ ಅದೇ ದಾರಿ ತುಳಿಯುವುದು ಸರಿಯಲ್ಲವಾದರೂ  ನೀವು ಅವಳಿಗೆ ಮೋಸ ಮಾಡುತ್ತಿರುವುದರಿಂದ ಅವಳೂ ಒಂದು ವೇಳೆ ಅದೇ ದಾರಿ ತುಳಿದರೆ ಅವಳಲ್ಲಿ ಅದಕ್ಕೆ ಸಮರ್ಥನೆಯೂ ಇದೆ. ಮೊದಲು ನೀವು ಆ ಚಾಳಿ ಬಿಡಿ. ಹೆಂಡತಿಯನ್ನು ಮನಸಾರೆ ಪ್ರೀತಿಸಿ. ಮಗು ಮತ್ತು ಅವಳನ್ನು ಸಾಧ್ಯವಾದ ಕಡೆಗೆಲ್ಲ ಕರೆದುಕೊಂಡು ಹೋಗಿ. ಗಂಡ ತನ್ನನ್ನು ಮಾತ್ರ ಪ್ರೀತಿಸುತ್ತಿದ್ದಾನೆ ಅಂತ ಅವಳಲ್ಲಿಯೂ ಭರವಸೆ ಮೂಡಿದರೆ ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ.

LEAVE A REPLY