ಇಂಗ್ಲೀಷ್ ಲೆಕ್ಚರರ್ ನನ್ನನ್ನು ಪ್ರೀತಿಸುತ್ತಿರಬಹುದೇ?

ಯುವ ಲೆಕ್ಚರರ್‍ಗೆ ಯಾರಾದರೂ ನಿಮ್ಮಂತಹ ಮುಗ್ಧ ಹುಡುಗಿಯರ ಜೊತೆ ಕ್ಲೋಸಾಗಿ ಮಾತಾಡುತ್ತಾ, ಅವಕಾಶ ಸಿಕ್ಕರೆ ತಮ್ಮ ತೆವಲೂ ತೀರಿಸಿಕೊಳ್ಳುವ ಬಯಕೆ ಇರಬಹುದು.

ಪ್ರ : ನಾನೀಗ ಪಿಯುಸಿ ಎರಡನೇ ವರ್ಷದಲ್ಲಿದ್ದೇನೆ. ನಾನು ಆಟ್ರ್ಸ್ ವಿದ್ಯಾರ್ಥಿನಿ. ನನಗೆ ಲಿಟರೇಚರ್ ಅಂದರೆ ಇಷ್ಟ. ಅದು ಇಷ್ಟವಾಗಲು ಮತ್ತೂ ಒಂದು ಕಾರಣವೆಂದರೆ ನಮಗೆ ಕಲಿಸುತ್ತಿರುವ ಆ ಇಂಗ್ಲೀಷ್ ಲೆಕ್ಚರರ್. ತುಂಬಾ ಹ್ಯಾಂಡ್‍ಸಮ್ ಇದ್ದಾರೆ. ಯಂಗ್ ಕೂಡಾ. ಅವರ ಡ್ರೆಸ್ಸಿಂಗ್ ಸ್ಟೈಲ್, ತಾನು ಗಂಭೀರವಾಗಿಯೇ ಇದ್ದು ನಮ್ಮನ್ನು ನಗೆಗಡಲಲ್ಲಿ ಮುಳುಗಿಸುವ ಅವರ ಜೋಕ್ಸ್, ಕ್ಲಾಸನ್ನು ಕಂಟ್ರೋಲ್ ಮಾಡುವ ರೀತಿ ಎಲ್ಲದರಿಂದಲೂ ನಾನು ಅವರ ಫ್ಯಾನ್ ಆಗಿದ್ದೇನೆ. ನಾನು ಕಲಿಯುವುದರಲ್ಲಿ ಅಷ್ಟೇನೂ ಹುಶಾರಿಲ್ಲದಿದ್ದರೂ ಅವರಿಗೂ ನನ್ನ ಕಂಡರೆ ಇಷ್ಟ. ಪಾಠ ಮಾಡುವಾಗ ಅನೇಕ ಬಾರಿ ನನ್ನನ್ನು ನೋಡುತ್ತಾರೆ. ಕೆಲವೊಮ್ಮೆ ಕ್ಲಾಸ್ ಮುಗಿದ ಬಳಿಕವೂ ಏನಾದರೂ ನೆಪ ಹೇಳಿ ನನ್ನನ್ನು ಅವರ ಚೇಂಬರಿಗೆ ಕರೆಯುತ್ತಾರೆ. ತುಂಬಾ ಪರ್ಸನಲ್ಲಾಗಿ ಆತ್ಮೀಯತೆಯಿಂದ ಮಾತಾಡುತ್ತಾರೆ. ನಾನು ಚೆನ್ನಾಗಿ ಮಾತಾಡುತ್ತೇನಂತೆ. ಅದಕ್ಕಾಗಿ ಅವರಿಗೆ ನನ್ನ ಜೊತೆ ಮಾತಾಡುವುದೆಂದರೆ ಇಷ್ಟವಂತೆ. ಕೆಲವೊಮ್ಮೆ ರಜಾದಿನದಲ್ಲಿ ಸೆಲ್‍ಫೋನ್‍ಗೂ ಕರೆ ಮಾಡುತ್ತಾರೆ. ದಿನಾ ಅವರ ಗುಡ್‍ಮಾರ್ನಿಂಗ್ ಮೆಸೇಜ್ ನೋಡಿಯೇ ನಾನು ಹಾಸಿಗೆ ಬಿಟ್ಟೇಳುವುದು ಮತ್ತು ಅವರ ಗುಡ್‍ನೈಟ್ ಮಸೇಜೇ ನನಗೆ ಲಾಲಿ ಹಾಡಿ ಮಲಗುವಂತೆ ಮಾಡುವುದು. ಅವರು ನನ್ನನ್ನು ಪ್ರೀತಿಸುತ್ತಿದ್ದೇನೆ ಅಂತ ಇನ್ನೂ ಬಾಯಿಬಿಟ್ಟು ಹೇಳಿಲ್ಲ. ಆ ದಿನಕ್ಕಾಗಿ ಕಾಯುತ್ತಿದ್ದೇನೆ. ಅವರನ್ನೇ ಮದುವೆಯಾಗಬೇಕೆಂದಿದ್ದೇನೆ. ನಾನೇ ಪ್ರೀತಿಸುತ್ತೇನೆ ಅಂತ ಅವರಿಗೆ ಹೇಳಿಬಿಡಲಾ?

: ಏನು ಮರೀ ಇನ್ನೂ ಮೇಜರ್ ಕೂಡಾ ಆಗಿಲ್ಲ, ಈಗಲೇ ಪ್ರೀತಿ, ಪ್ರೇಮನಾ? ಈಗಷ್ಟೇ ನಿನ್ನ ದೇಹದಲ್ಲಿ ತಾರುಣ್ಯ ಕಾಲಿಡುತ್ತಿದೆ. ಹೊರಗಿನ ಜಗತ್ತನ್ನು ಬಿಟ್ಟ ಕಣ್ಣುಗಳಿಂದ ನೋಡಲು ಶುರುಮಾಡಿದ್ದಿ ಅಷ್ಟೇ. ಸ್ಕರ್ಟ್ ಯೂನಿಫಾರ್ಮಿನಿಂದ ಸಲ್ವಾರ್‍ಗೆ ಬಡ್ತಿ ಸಿಕ್ಕಿದೆಯಷ್ಟೇ. ಆಗಲೇ ಮದುವೆ ಆಲೋಚನೆಯಾ? ಈ ವಯಸ್ಸಿನಲ್ಲಿ ಯಾರಾದರೂ ಚೆನ್ನಾಗಿ ಮಾತಾಡಿಸುತ್ತಾರೆ ಅಂದರೆ ಏನೋ ಮಧುರಾನುಭವ ಸಹಜ. ಆದರೆ ಅದನ್ನೇ ಪ್ರೀತಿ ಅಂದುಕೊಂಡು ಬೆನ್ನುಹತ್ತಿಹೋಗುವುದಿದೆಯಲ್ಲ ಅದು ಭವಿಷ್ಯದ ದೃಷ್ಟಿಯಲ್ಲಿ ಖಂಡಿತಾ ಒಳ್ಳೆಯದಲ್ಲ. ಯುವ ಲೆಕ್ಚರರಿಗೆ ಯಾರಾದರೂ ನಿಮ್ಮಂತಹ ಮುಗ್ಧ ಹುಡುಗಿಯರ ಜೊತೆ ಕ್ಲೋಸಾಗಿ ಮಾತಾಡುತ್ತಾ, ಅವಕಾಶ ಸಿಕ್ಕರೆ ತಮ್ಮ ತೆವಲೂ ತೀರಿಸಿಕೊಳ್ಳುವ ಬಯಕೆ ಇರಬಹುದು. ಅದಕ್ಕಾಗಿ ನಿಮ್ಮಂತಹ ಮಿಕಕ್ಕಾಗಿ ಬಲೆ ಬೀಸುತ್ತಾರೆ. ನೀವು ಸಿಗದಿದ್ದರೆ ಬೇರೆಯವರ ಬಳಿ ಇದೇ ಜಾಲ ಹೆಣೆಯುತ್ತಾರೆ. ಆ ಲೆಕ್ಚರರ್ ಹತ್ತಿರ ಎಷ್ಟು ಬೇಕೋ ಅಷ್ಟೇ ಮಾತಾಡಿ. ಅವರನ್ನು ಎದುರು ಹಾಕಿಕೊಳ್ಳದೇ ಸ್ವಲ್ಪ ಗಂಭೀರವಾಗಿರಿ ಅಷ್ಟೇ. ಅವರ ಚೇಂಬರಿಗೆ ಹೋಗುವ ಸಂದರ್ಭ ಬಂದರೆ ನಿಮ್ಮ ಗೆಳತಿಯರನ್ನು ಕರೆದುಕೊಂಡು ಹೋಗಿ. ನಿಮ್ಮ ಓದು ಮುಗಿದು ನಿಮ್ಮ ಕಾಲಮೇಲೆ ನೀವು ನಿಲ್ಲುವವರೆಗೆ ಬೇರೆ ಕಡೆ ಗಮನ ಕೊಡದಿರುವುದೇ ಉತ್ತಮ.