ಅವನು ನನ್ನನ್ನು ಪ್ರೀತಿಸುತ್ತಾನೋ ಇಲ್ಲವೋ…

ಪ್ರ : ಕಳೆದ ದಸರಾ ರಜೆಯಲ್ಲಿ ನಾನು ಅಪ್ಪ, ಅಮ್ಮನ ಜೊತೆ ಮಧ್ಯಭಾರತದ ಪ್ರವಾಸ ಹೋಗಿದ್ದೆ. ನಮ್ಮ ಟ್ರಾವಲ್ಸ್ ಪ್ಯಾಕೇಜಿನ ರೀತಿಯಲ್ಲಿಯೇ ನಮ್ಮ ಹಾಗೇ ಬಂದ ಅನೇಕ ಕುಟುಂಬಗಳಲ್ಲಿ ಒಂದು ಫ್ಯಾಮಿಲಿ ನಮಗೆ ಆತ್ಮೀಯವಾಯಿತು. ಅವರೂ ಕನ್ನಡದವರೇ. ಆ ಕುಟುಂಬದ ಹುಡುಗ ನನ್ನ ವಾರಗೆಯವನೇ. ಹಿರಿಯರು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ ಎಷ್ಟೋ ಹಿಂದಿನ ಸ್ನೇಹಿತರಂತೆ ಮಾತಾಡುತ್ತಿರುವಾಗ ಅವನು ನನಗೆ ಕಂಪೆನಿಯಾದ. ಎರಡು ವಾರ ಗಮ್ಮತ್ತಾಗಿ ಕಳೆದೆವು. ಪೇರೆಂಟ್ಸ್ ದೇವಸ್ಥಾನ ಅಂತ ತಿರುಗುತ್ತಿದ್ದರೆ ನಾವಿಬ್ಬರೂ ನಮ್ಮ ನಮ್ಮ ಕೆಮರಾಗಳಲ್ಲಿ ಸುತ್ತಲಿನ ಬೆರಗುಗಳನ್ನು ಸೆರೆ ಹಿಡಿಯುವುದರಲ್ಲಿಯೇ ಸಮಯ ಕಳೆದೆವು. ಅವನು ನನಗೆ ಫಸ್ಟ್ ಸೈಟಿನಲ್ಲೇ ತುಂಬಾ ಇಷ್ಟವಾದ. ಟೂರ್ ಮುಗಿಸಿ ಬಂದ ನಂತರವೂ ಅವನ ಜೊತೆ ವಾಟ್ಸಪ್ ಮತ್ತು ಫೇಸ್ ಬುಕ್ಕಿನಲ್ಲಿ ಸತತ ಸಂಪರ್ಕದಲ್ಲಿ ಇದ್ದೇನೆ. ನಾನೇನೂ ಹುಡುಗರನ್ನು ನೋಡದವಳಲ್ಲ. ನನ್ನ ಕಾಲೇಜಿನಲ್ಲಿ ಅನೇಕರು ನನ್ನ ಹಿಂದೆ ಬಿದ್ದಿದ್ದರೂ ಯಾರಲ್ಲೂ ಆಗದ ಮಧುರ ಭಾವನೆ ಈ ಹುಡುಗನ ಮೇಲೆ ಉಂಟಾಗಿದೆ. ನಾನು ತೆಗೆದ ಅವನ ಅನೇಕ ಫೋಟೋಗಳನ್ನೆಲ್ಲ ಮೊಬೈಲಿನಲ್ಲಿ ನೋಡುತ್ತಿರುತ್ತೇನೆ. ಅವನೂ ನನ್ನ ಜೊತೆ ತುಂಬಾ ಫ್ರೆಂಡ್ಲಿಯಾಗಿಯೇ ಚಾಟ್ ಮಾಡುತ್ತಾನೆ. ಆದರೆ ಅವನಿಗೆ ನನ್ನ ಮೇಲೆ ಲವ್ ಇದೆಯಾ ಅಂತ ಗೊತ್ತಿಲ್ಲ. ಹೇಗೆ ಮುಂದುವರಿಯಲಿ?

: ಈ ಪ್ರೀತಿ ಅನ್ನುವುದೇ ಹಾಗೆ. ಯಾರಿಗೆ ಯಾವಾಗ ಎಲ್ಲಿ ಯಾರ ಮೇಲೆ ಹುಟ್ಟುತ್ತದೆ ಅಂತಲೇ ಅರ್ಥವಾಗುವುದಿಲ್ಲ. ಈಗ ಕೆಲವು ತಿಂಗಳಿಂದ ಅವನ ಜೊತೆ ನಿಮಗಿದ್ದ ಸಂಪರ್ಕದಿಂದ ಅವನ ಭಾವನೆ ತಿಳಿಯಲು ಸಾಧ್ಯವಾಗಲಿಲ್ಲವಾ? ಹಾಗಿದ್ದರೆ ನೀವು ಅವನನ್ನು ಪ್ರೀತಿಸುತ್ತಿರುವಂತೆ ಅವನಿಗೂ ನಿಮ್ಮ ಮೇಲೆ ಲವ್ ಇದೆಯಾ ಅಂತ ನೋಡಲು ಕೆಲವು ದಿನ ಅವನ ಜೊತೆಗಿನ ಸಂಪರ್ಕ ನಿಲ್ಲಿಸಿ. ಅವನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ ಖಂಡಿತಾ ಅವನಾಗಿಯೇ ನಿಮ್ಮನ್ನು ಸಂಪರ್ಕಿಸುತ್ತಾನೆ. ಅವನ ಜೀವನದಲ್ಲಿ ಬೇರೆ ಯಾರಾದರೂ ಇದ್ದಾರಾ ಅಂತ ಪರೋಕ್ಷವಾಗಿ ಕೇಳಬಹುದು. ನೀವು ಅವನನ್ನು ಇಷ್ಟಪಡುತ್ತಿರುವ ಬಗ್ಗೆಯೂ ಹಿಂಟ್ಸ್ ಕೊಡಬಹುದು. ಅವನ ಪ್ರತಿಕ್ರಿಯೆ ತಣ್ಣಗಿದ್ದರೆ ಅವನು ನಿಮ್ಮನ್ನು ಬರೀ ಸ್ನೇಹಿತೆಯಾಗಿ ನೋಡುತ್ತಿದ್ದಾನೆ ಅಂತ ಅರ್ಥ. ಅಷ್ಟಕ್ಕೂ ಅವನು ನಿಮಗೆ ಸರಿಯಾಗಿ ಇನ್ನೂ ಅರ್ಥವಾಗುತ್ತಿಲ್ಲವಾದರೆ ಒಮ್ಮೆ ಡೈರೆಕ್ಟಾಗಿ ಹೇಳುವುದೂ ಒಳ್ಳೆಯದೇ. ಆದರೆ ನೀವು ಅವನ ಉತ್ತರ ಏನೇ ಬಂದರೂ ಸಮಚಿತ್ತಳಾಗಿ ಸ್ವೀಕರಿಸಲು ತಯಾರಾಗಿಯೇ ನೀವು ಅವನನ್ನು ಪ್ರೀತಿಸುತ್ತಿರುವ ವಿಷಯ ಹೇಳಿ. ಅವನದು ಪಾಸಿಟಿವ್ ಉತ್ತರವಾಗಿದ್ದರೆ ಶುರುವಾಗಲಿ ನಿಮ್ಮ ಪ್ರೇಮ್‍ಕಹಾನಿ. ನೆಗೆಟಿವ್ ಆಗಿದ್ದರೆ ಅವನು ನಿಮಗಾಗಿ ಹುಟ್ಟಿ ಬಂದವನಲ್ಲ ಅಂತ ಇಗ್ನೋರ್ ಮಾಡಿ.