ಉಡುಪಿಯಲ್ಲೂ ವೈದ್ಯರ ಆಕ್ರೋಶ ವ್ಯಕ್ತ

ಹಲ್ಲೆ ಖಂಡಿಸಿ ಉಡುಪಿ ಜಿಲ್ಲೆಯ ನೂರಾರು ವೈದ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕರ್ತವ್ಯನಿರತ ವೈದ್ಯರ ಮೇಲೆ ಉತ್ತರ ಕನ್ನಡ ಜಿಲ್ಲೆ ಬಿಜೆಪಿ ಸಂಸದ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ವೈದ್ಯರು ಶನಿವಾರ ನಗರದ ಸರ್ವೀಸ್ ಬಸ್ ನಿಲ್ದಾಣದ ಕ್ಲಾರ್ಕ್ ಟವರ್ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ವೈದ್ಯಕೀಯ ಸಂಘದ ರಾಜ್ಯ ಕೌನ್ಸಿಲ್ ಸದಸ್ಯ, ನಗರದ ಮನೋವೈದ್ಯ ತಜ್ಞ ಪಿ ವಿ ಭಂಡಾರಿ ಮಾತನಾಡಿ, “ಶಿರಸಿ ನಗರದ ವೈದ್ಯರಿಂದ ಏನೇ ತಪ್ಪು ನಡೆದಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲು ಕಾನೂನು ಕ್ರಮಗಳಿವೆ. ಆದರೆ ಅಲ್ಲಿನ ಸಂಸದ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಹಾಗಾಗಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಪೊಲೀಸರು ಸ್ವಯಂಪ್ರೇತರಿತ ಕೇಸು ದಾಖಲಿಸಿದರೆ ಸಾಲದು, ಸಂಸದ ಎನ್ನುವ ಕಾರಣಕ್ಕೆ ಪೊಲೀಸರು ಬಂಧಿಸದೇ ಇರಬಾರದು, ವೈದ್ಯರ ಮೇಲೆ ಹಲ್ಲೆ ನಡೆಸಿದ ಅನಂತಕುಮಾರ್ ಹೆಗಡೆಯನ್ನು ಕೂಡಲೇ ಬಂಧಿಸಿ, ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

“ಬಂಧನವಾಗದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತದೆ. ಈ ಹಲ್ಲೆಯನ್ನು ಕಾನೂನು ಗೊತ್ತಿಲ್ಲದ ಜನಸಾಮಾನ್ಯ ನಡೆಸಿಲ್ಲ. ಬದಲಾಗಿ ಕಾನೂನು ರೂಪಿಸುವ ಜನಪ್ರತಿನಿಧಿಯೇ ನಡೆಸಿದ್ದಾನೆ. ಇತ್ತೀಚಿನ ದಿನಗಳಲ್ಲಿ ಗ್ರಾಮ ಇಲ್ಲವೇ ಜಿಲ್ಲಾ ಮಟ್ಟದಲ್ಲಿ ಜನಪ್ರನಿಧಿಗಳು ನಿರಂತರ ಸರಕಾರಿ ಹಾಗೂ ಖಾಸಗಿ ವೈದ್ಯರ ಮೇಲೆ ಹಲ್ಲೆ ನಡೆಸುತ್ತಾಲೇ ಇದ್ದಾರೆ. ಹಾಸನ ಜಿಲ್ಲೆಯಲ್ಲಿಯೂ ಕರ್ತವ್ಯನಿರತ ವೈದ್ಯರ ಮೇಲೆ ಗೂಂಡಾಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ” ಎಂದು ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.

“ಅರ್ಧ ದಿನ ಮುಷ್ಕರ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿದ್ದಲ್ಲಿ ಅನಿರ್ಧಿಷ್ಟಾವಧಿ ಸೇವೆ ಸ್ಥಗಿತಗೊಳಿಸಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಭಂಡಾರಿ ಎಚ್ಚರಿಸಿದರು.