ರೋಗಿ ಪಿತ್ತಕೋಶದಿಂದ 11,816 ಕಲ್ಲು ಹೊರಗೆ

ಜೈಪುರ್ :  ಅಪರೂಪದ ಪ್ರಕರಣವೊಂದರಲ್ಲಿ  ಇಲ್ಲಿನ ಸವಾಯ್ ಮಾನ್ ಸಿಂಗ್ ಸರಕಾರಿ ಆಸ್ಪತ್ರೆಯ ವೈದ್ಯರು  ಶಸ್ತ್ರಚಿಕಿತ್ಸೆಯ ಮೂಲಕ ವ್ಯಕ್ತಿಯೊಬ್ಬನ ಪಿತ್ತಕೋಶದಿಂದ ಬರೋಬ್ಬರಿ 11,816 ಕಲ್ಲುಗಳನ್ನು ಹೊರತೆಗೆದಿದ್ದಾರೆ.  ಆಸ್ಪತ್ರೆಗೆ ದಾಖಲಾದಾಗ ಅತೀವ ನೋವಿನಿಂದ ಬಳಲುತ್ತಿದ್ದ ಹಾಗೂ ಗಂಭೀರ ಸ್ಥಿತಿಯಲ್ಲಿದ್ದ ರೋಗಿ ಈಗ ಗುಣಮುಖನಾಗುತ್ತಿದ್ದಾನೆ ಎದು ಆಸ್ಪತ್ರೆ ಹೇಳಿದೆ.

ಮಥುರಾದ ಬಲಕಪುರ ನಿವಾಸಿ 46 ವರ್ಷದ ವಿನೋದ್ ಎಂಬ ಈ ವ್ಯಕ್ತಿ ತನ್ನ ಪಿತ್ತಕೋಶದಲ್ಲಿ ಇಷ್ಟೊಂದು ಪ್ರಮಾಣದ ಕಲ್ಲಗಳಿರಬಹುದೆಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಕಳೆದೊಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಿನೋದ್ ನೋವು ಅತಿಯಾದಾಗಲೆಲ್ಲಾ ನೋವು ನಿವಾರಕ ಮಾತ್ರೆಗಳಿಗೆ ಮೊರೆ ಹೋಗುತ್ತಿದ್ದರು. ಕೊನೆಗೆ  ಸಿಟಿ ಸ್ಕ್ಯಾನ್ ಮಾಡಿದಾಗ ಪಿತ್ತಕೋಶದಲ್ಲಿ ಉರಿಯೂತ ಪತ್ತೆಯಾಗಿದ್ದು  ನಂತರ ಆಸ್ಪತ್ರೆಗೆ ದಾಖಲಾಗಿದ್ದರು..

ವಿನೋದ್ ಡಯಾಬಿಟಿಸ್ ರೋಗಿಯೂ ಆಗಿದ್ದರಿಂದ  ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುವುದಕ್ಕೆ ಕಾದ ಲ್ಯಾಪ್ರೋಸ್ಕೋಪಿಕ್ ಶಸ್ತ್ರಕ್ರಿಯೆಯಲ್ಲಿ  ಗಿನ್ನೆಸ್ ದಾಖಲೆ ಹೊಂದಿರುವ ಡಾ ಜೀವನ್ ಕಂಕಾರಿಯಾ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿತ್ತು. ರೋಗಿಯ ಪಿತ್ತಕೋಶದಿಂದ ತೆಗೆದ ಕಲ್ಲುಗಳ ಗಾತ್ರ 1.5 ಎಂಎಂನಿಂದ 3..5 ಎಂ ಎಂ ಆಗಿದ್ದವು.

ಇಷ್ಟೊಂದು ಸಂಖ್ಯೆಯ ಕಲ್ಲುಗಳನ್ನು ಪಿತ್ತಕೋಶದಿಂದ ಹೊರತೆಗೆದ ಪ್ರಥಮ ಪ್ರಕರಣ ಇದಾಗಿದೆಯೆಂದು ಹೇಳಿರುವ ವೈದ್ಯರ ತಂಡ  ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಮತ್ತು ಗಿನ್ನೆಸ್ ದಾಖಲೆಗಾಗಿ ಅರ್ಜಿ ಸಲ್ಲಿಸಿದೆ.  ವಿನೋದ್ ಪಾಲಿಗಂತೂ ಈ ಶಸ್ತ್ರಚಿಕಿತ್ಸೆ ಮರುಜನ್ಮವಾಗಿ ಬಿಟ್ಟಿದೆ.