ವೈದ್ಯೆಯ ನಿರ್ಲಕ್ಷ್ಯಕ್ಕೆ ಮಗು ಸಾವು

ಮನೆ ಮಂದಿ ಆರೋಪ, ಕದ್ರಿ ಪೊಲೀಸರಿಗೆ ದೂರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹೆರಿಗೆಗೆಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪುವಂತಾಗಿದೆ ಎಂದು ಮನೆ ಮಂದಿ ದೂರಿದ್ದಾರೆ. ಮಗುವಿನ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯೆ ಸಿ ಜಮೀಲಾ ಕಾರಣ ಎಂದು ಆರೋಪಿಸಿರುವ ಗೃಹಿಣಿಯ ಪತಿ ಬೈಕಂಪಾಡಿ ಅಂಗರ ನಿವಾಸಿ ಬಿ ಮುಹಮ್ಮದ್ ಹಾರೀಸ್, ವೈದ್ಯೆ ವಿರುದ್ಧ ಕದ್ರಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಹಾರೀಸ್ ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದು, ಮಂಗಳೂರಿನ ಫಳ್ನೀರ್ ರಸ್ತೆಯ ಯೂನಿಟಿ ಆಸ್ಪತ್ರೆ ಮುಂಭಾಗದ ಕಾಂಪ್ಲೆಕ್ಸಿನಲ್ಲಿರುವ ಹೆರಿಗೆ ತಜ್ಞೆ ಜಮೀಲಾರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಇವರಿಗೆ ಹೊಟ್ಟೆಯಲ್ಲಿ ಆಗ್ಗಾಗ್ಗೆ ನೋವು ಬರುತ್ತಿದ್ದ ಹಿನ್ನೆಲೆಯಲ್ಲಿ ಜಮೀಲಾರ ಸಲಹೆ ಮೇರೆಗೆ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನೋವು ಕಡಿಮೆಯಾಗಿರಲಿಲ್ಲ. ಜ 12ರಂದು ಗರ್ಭಿಣಿಗೆ ತೀವ್ರ ಹೊಟ್ಟೆನೋವು, ರಕ್ತಸ್ರಾವ ಕಾಣಿಸಿಕೊಂಡಿದ್ದು, ವೈದ್ಯೆ ಜಮೀಲಾರನ್ನು ಭೇಟಿ ಮಾಡಿದ್ದೆವು. ಆದರೆ ವೈದ್ಯೆ ಚಿಕಿತ್ಸೆ ನೀಡುವುದು ಬಿಟ್ಟು, ಅವರ ಖಾಸಗಿ ಸಮಸ್ಯೆಗಳನ್ನು ಹೇಳಿಕೊಂಡು ನಮ್ಮನ್ನು, ಗರ್ಭಿಣಿಯನ್ನು ನಿರ್ಲಕ್ಷಿಸಿದರು. ಅವರು ಆ ಕ್ಷಣವೇ ಬರುತ್ತಿದ್ದರೆ ತನ್ನ ಪತ್ನಿ, ಮಗು ಆರೋಗ್ಯವಾಗಿರುತ್ತಿದ್ದರು. ವೈದ್ಯೆ ನಿರ್ಲಕ್ಷ್ಯಕೆ ನಾವು ಮಗುವನ್ನು ಕಳೆದುಕೊಳ್ಳಬೇಕಾಯಿತು ಎಂದು ಪತಿ ಹಾರೀಸ್ ದೂರಿದ್ದಾರೆ.

ತಾಯಿ, ಮಗುವಿನ ಬಗ್ಗೆ ಪೋಷಕರಿಗೆ ಸಂಪೂರ್ಣ ಮಾಹಿತಿ ನೀಡಬೇಕಾಗಿದ್ದ ವೈದ್ಯೆ ಸರಿಯಾಗಿ ಮಾಹಿತಿ ನೀಡದೇ ಈ ರೀತಿ ವಂಚಿಸಿರುವುದು ನಮಗೆ ಆಘಾತ ತಂದಿದೆ. ಹಲವು ದಿನಗಳ ಹಿಂದೆಯೇ ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿದೆ ಎಂದು ಆಕೆಯನ್ನು ತಪಾಸಣೆ ಮಾಡಿದ ಬೇರೆ ವೈದ್ಯರು ನಮಗೆ ಬಳಿಕ ತಿಳಿಸಿದರು. ಆದರೆ ಡಾ ಜಮೀಲಾರು ಇದನ್ನು ಸಂಪೂರ್ಣ ಗುಟ್ಟಾಗಿಸಿಟ್ಟಿದ್ದರು ಎಂದು ಪತಿ ದೂರಿದ್ದಾರೆ. ಮನೆ ಮಂದಿ ಪ್ರಶ್ನಿಸಿದಾಗಲೂ ಉಡಾಫೆಯ ಉತ್ತರ ನೀಡಿ ನುಣುಚಿಕೊಂಡಿದ್ದಾರೆ. ಹೀಗಾಗಿ ಚಿಕಿತ್ಸೆ ನೀಡಿದ ವೈದ್ಯೆ ಡಾ ಜಮೀಲಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪತಿ ಮುಹಮ್ಮದ್ ಹಾರೀಸ್ ಕದ್ರಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.