ಎಮ್ಮೆ ನುಂಗಿದ ಚಾಕು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಶಿರಸಿ ಪಶುವೈದ್ಯರು

ನಮ್ಮ ಪ್ರತಿನಿಧಿ ವರದಿ

ಶಿರಸಿ : ಕಳೆದ ಒಂದೂವರೆ ತಿಂಗಳಿಂದ ಆಕಸ್ಮಿಕವಾಗಿ ನುಂಗಿದ ಚಾಕುವನ್ನು ಹೊಟ್ಟೆಯಲ್ಲೇ ಇಟ್ಟುಕೊಂಡ ಎಮ್ಮೆಯು ಹಾಲು ಕೊಡುತ್ತಾ ನೋವು ಅನುಭವಿಸುತ್ತಲೇ ಇತ್ತು. ಸೋಮವಾರ ಸಂಜೆ ಶಿರಸಿ ಪಶುವೈದ್ಯ ಡಾ ಪಿ ಎಸ್ ಹೆಗಡೆ ನೇತೃತ್ವದಲ್ಲಿ ಆಪರೇಶನ್ ಮೂಲಕ ಎಮ್ಮೆಯ ಹೊಟ್ಟೆಯಲ್ಲಿದ್ದ ಚಾಕುವನ್ನು ಹೊರತೆಗೆಯಲಾಯಿತು. ಎಮ್ಮೆಯು ಮಂಗಳವಾರ ಪೂರ್ಣ ಚೇತರಿಕೆ ಕಂಡಿದೆ.

ಶಿರಸಿಯ ಕುಂಟೆಮನೆಯ ಗೋವಿಂದ ಹೆಗಡೆ ಅವರ ಮನೆಯಲ್ಲಿ ಬಾಳೆಕಾಯಿ ಸುಲಿಯುವಾಗ ಜಾರಿ ಬಿದ್ದ ಚಾಕು ಕಳೆದುಹೋಗಿತ್ತು. ಎಷ್ಟು ಹುಡುಕಿದರೂ ಸಿಕ್ಕಿರದ ಕಾರಣ ಹುಡುಕುವುದನ್ನೇ ನಿಲ್ಲಿಸಿದ್ದರು. ಇದಾದ ನಂತರ ಎಮ್ಮೆಯ ಆರೋಗ್ಯದಲ್ಲಿ ಕೆಲವು ತೊಂದರೆ ಕಾಣಿಸಿಕೊಂಡಿತ್ತು. ಅದಕ್ಕೆ ಪಶುವೈದ್ಯರಿಂದ ಉಪಚಾರವೂ ಆಗಿತ್ತು. ತದನಂತರ ಒಂದೂವರೆ ತಿಂಗಳು ಕಳೆದ ಮೇಲೆ ಎಮ್ಮೆಯ ಮುಂಗಾಲುಗಳೆರಡರ ಸಂದಿನಲ್ಲಿ ಏನೋ ಒಂದು ಬಾವು ಕಾಣಿಸಿಕೊಂಡಿತ್ತು. ಹಾಲು ನೀಡುವಲ್ಲಿಯೂ ಸ್ವಲ್ಪ ವ್ಯತ್ಯಯ ಕಾಣುತ್ತಿತ್ತು. ಎಮ್ಮೆ ಬಾವಿರುವ ಆ ಭಾಗದಲ್ಲಿ ಮುಟ್ಟಲು ಕೊಡುತ್ತಿರಲಿಲ್ಲ.

ಕಂಗಾಲಾದ ಯಜಮಾನ ಗೋವಿಂದ ಹೆಗಡೆ ಶಿರಸಿಯ ಸಮರ್ಪಣದ ಪಶುವೈದ್ಯ ಡಾ ಪಿ ಎಸ್ ಹೆಗಡೆ ಅವರನ್ನು ಸಂಪರ್ಕಿಸಿ ಸಮಸ್ಯೆ ವಿವರಿಸಿದರು. ಎಮ್ಮೆಯನ್ನು ಪರೀಕ್ಷಿಸಿದ ವೈದ್ಯರು ಆ ಭಾಗಕ್ಕೆ ಚುಚ್ಚುಮದ್ದಿನಿಂದ ಅರಿವಳಿಕೆ ನೀಡಿ, ಹುಣ್ಣನ್ನು ಕೆರೆದು ರಸಿಗೆ (ಫಸ್) ಹೊರತೆಗೆದಿದ್ದರು. 2 ದಿನಗಳ ನಂತರ ಅದೇ ಭಾಗದಲ್ಲಿ ಏನೋ ಚೂಪನೆ ವಸ್ತು ಕಾಣಲಾರಂಭಿಸಿತ್ತು. ಎಮ್ಮೆ ಬಾವನ್ನು ಪರಿಶೀಲಿಸಿದಾಗಲೇ ಏನೋ ಹೊರಧಾತು ವಸ್ತು ಸೇರಿದೆ ಎಂದು ತಿಳಿಸಿದ್ದ ಡಾ ಪಿ ಎಸ್ ಹೆಗಡೆ ಮತ್ತೆ ಎಮ್ಮೆಯ ಬಾವನ್ನು ಪರಿಶೀಲಿಸಿ, ಚುಚ್ಚುಮದ್ದು ನೀಡಿ ಚಾಕು ಇರುವುದನ್ನು ಖಚಿತಪಡಿಸಿಕೊಂಡು ಸೋಮವಾರ ಆಪರೇಶನ್ ಮಾಡಿ ಅದನ್ನು ಹೊರತೆಗೆದು ಎಮ್ಮೆಗೆ ಉಪಚಾರ ನೀಡಿದ್ದಾರೆ. 2 ದಿನಗಳ ಉಪಚಾರದಿಂದ ಮಂಗಳವಾರ ಎಮ್ಮೆ ಚೇತರಿಸಿಕೊಂಡಿದೆ.