ಕೆ ಎಂ ಸಿ ವಿರುದ್ಧ ಕಾನೂನು ಸಮರದಲ್ಲಿ ವೈದ್ಯರಿಗೆ ಗೆಲುವು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರತಿ ಐದು ವರ್ಷಕ್ಕೊಂದು ಬಾರಿ ನವೀಕರಣಕ್ಕಾಗಿ ಎಂಬಿಬಿಎಸ್ ಖಾಯಂ ನೋಂದಣಿ ಶುಲ್ಕ 1,000 ರೂ ಪಾವತಿಸಬೇಕಿದ್ದು, ಈ ಬಗ್ಗೆ ಕೆಎಂಸಿ ಪತ್ರಿಕೆಗಳಲ್ಲಿ ನೋಟಿಸು ಜಾರಿಗೊಳಿಸಿ ನವೀಕರಣ ಶುಲ್ಕಕ್ಕೆ ಬೇಡಿಕೆ ಇಟ್ಟಿತ್ತು. ಆದರೆ…

ಮಂಗಳೂರಿನ ಡಾ ಬಿ ಎಸ್ ಕಕ್ಕಿಲ್ಲಾಯ ಮತ್ತು ಡಾ ಯೋಗೇಂದ್ರ ರೆಡ್ಡಿ, ಆರಂಭದಲ್ಲಿ ಈ ಕುರಿತು ಕಾನೂನು ಅವಕಾಶಗಳ ಬಗ್ಗೆ ಪರಿಶೀಲಿಸಿದ್ದು, 1993ರ ಕರ್ನಾಟಕ ಮೆಡಿಕಲ್ ರಿಜಿಸ್ಟ್ರೇಶನ್ ಕಾಯ್ದೆಯಲ್ಲಿ ಇದಕ್ಕೆ ಸೂಕ್ತ ಶಾಸನೀಯ ತಿದ್ದುಪಡಿಯಾಗದಿರುವುದು ಕಂಡು ಬಂದಿತ್ತು.

ಈ ಕಾರಣ ಮುಂದಿಟ್ಟು ಮಂಗಳೂರಿನಿಂದ ಈ ವೈದ್ಯರಿಬ್ಬರು ವಾಟ್ಸಪ್ಪಿನಲ್ಲಿ ಕೆಎಂಸಿಯ ನೋಂದಣಿ ರಿಜಿಸ್ಟ್ರೇಶನ್ ಶುಲ್ಕದ ವಿರುದ್ಧ ಜಾಗೃತಿ ಚಳುವಳಿ ಆರಂಭಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ.

ಶುಲ್ಕ ವಿಷಯದಲ್ಲಿ ಕೆಎಂಸಿ, ಐಎಂಎ-ಕೆಎಸ್‍ಬಿಯೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಬಳಿಕ ಕೆಎಂಸಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದ ವೈದ್ಯರಿಗೆ ನೋಟಿಸು ಜಾರಿ ಮಾಡಲಾರಂಭಿಸಿತ್ತು.

ಈ ವಿಷಯದಲ್ಲಿ 2016 ಡಿಸೆಂಬರ್ 16ರಂದು ಹೈಕೋರ್ಟಿನಲ್ಲಿ ಎರಡು ರಿಟ್ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ವೇಳೆ ವೈದ್ಯರ ನಿಲುವು ಎತ್ತಿ ಹಿಡಿದ ಕೋರ್ಟ್, ಕರ್ನಾಟಕ ಮೆಡಿಕಲ್ ರಿಜಿಸ್ಟರಿನಿಂದ ವೈದ್ಯರ ಹೆಸರು ರದ್ದುಪಡಿಸದಂತೆ ಕೆಎಂಸಿಗೆ ನಿರ್ದೇಶಿಸಿದೆ.

ಇದು ಮಂಗಳೂರು ವೈದ್ಯರಿಗೆ ವಾಟ್ಸಪ್, ಸಾಮಾಜಿಕ ಮಾಧ್ಯಮದ ಮೂಲಕ ಸಿಕ್ಕಿದ ಜಯವಾಗಿದೆ. ಇದರಲ್ಲಿ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ (ಎಎಂಸಿ-ಮಂಗಳೂರು) ಸಕ್ರಿಯವಾಗಿ ಪಾಲ್ಗೊಂಡಿತ್ತು. ಡಾ ಕಕ್ಕಿಲ್ಲಾಯ ಮತ್ತು ಡಾ ರೆಡ್ಡಿ ಕೆಎಂಸಿ ವಿರುದ್ಧ ನಡೆಸಿದ ಸಾಮಾಜಿಕ-ಕಾನೂನು ಹೋರಾಟದಲ್ಲಿ ವೈದ್ಯರಿಗೆ ಐತಿಹಾಸಿಕ ಜಯ ತಂದಿತ್ತಿದ್ದಾರೆ.